ಶೃಂಗೇರಿ: ನವರಾತ್ರಿ ಉತ್ಸವ ಪ್ರಯುಕ್ತ ಮಂಗಳವಾರ ಶ್ರೀ ಜಗನ್ಮಾತೆ ಕೈಯಲ್ಲಿ ಕಮಂಡಲ, ಅಕ್ಷಮಾಲೆ, ಪುಸ್ತಕ, ಪಾಶ ಮತ್ತು ಚಿನ್ಮುದ್ರೆಗಳನ್ನು ಧರಿಸಿ ಹಂಸವಾಹನಾರೂಢಳಾಗಿ, ಬ್ರಹ್ಮನ ಪಟ್ಟದ ರಾಣಿಯಾಗಿ ಬ್ರಾಹ್ಮಿಯಾಗಿ ಭಕ್ತರನ್ನು ಅನುಗ್ರಹಿಸಿದಳು.
ಮಠದಲ್ಲಿ ನಾಲ್ಕು ವೇದಗಳ ಪಾರಾಯಣಗಳು, ವಾಲ್ಮೀಕಿ ರಾಮಾಯಣ, ದೇವೀಭಾಗವತ, ಮಾಧವೀಯ ಶಂಕರ ದಿಗ್ವಿಜಯ, ಸೂತಸಂಹಿತೆ, ಲಕ್ಷ್ಮೀನಾರಾಯಣ ಹೃದಯ, ದುರ್ಗಾಸಪ್ತಶತಿ ಪಾರಾಯಣಗಳು ನಡೆದವು. ದುರ್ಗಾಜಪ, ಭುವನೇಶ್ವರಿ ಜಪ, ಶ್ರೀಸೂಕ್ತ ಜಪಗಳು, ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ಶತರುದ್ರಾಭಿಷೇಕ, ಜಗನ್ಮಾತೆಯ ಆವಾಸಸ್ಥಾನವೆಂದು ಶಾಸ್ತ್ರದಲ್ಲಿ ತಿಳಿಸಿರುವ ಶ್ರೀಚಕ್ರಕ್ಕೆ ನವಾವರಣ ಪೂಜೆ, ಸುವಾಸಿನೀ ಹಾಗೂ ಕುಮಾರೀ ಪೂಜೆ ನೆರವೇರಿಸಲಾಯಿತು. ಜಗದ್ಗುರುಗಳು ಶ್ರೀ ಶಾರದೆ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಮಂಗಳವಾರ ಮೆಣಸೆ ಗ್ರಾಪಂ ಭಕ್ತಾದಿಗಳು ಬೀದಿ ಉತ್ಸವದಲ್ಲಿ ಭಾಗಿಯಾದರು. ಗೀರ್ವಾಣಿ ಮಹಿಳಾ ಮಂಡಳಿ, ಶ್ರೀರಾಮಸೇವಾ ಸಮಿತಿ, ಹುಲ್ಸಗಾರು, ಪ್ರಜ್ಞಾ ಯುವಕ ಸಂಘ, ಆದರ್ಶ ರೈತ ಮಿತ್ರಕೂಟ, ಶ್ರೀ ಶಾರದಾಂಬಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ, ಶ್ರೀ ರಾಘವೇಂದ್ರ ಸ್ವಾಮಿ ಭಜನಾ ಮಂಡಳಿ, ಜಯಪುರ, ಮೇಗುಂದ ಹೋಬಳಿ ಭಕ್ತಾದಿಗಳು, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗಿಯಾದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚೆನ್ಹೈನ ವಿದುಷಿ ಸವಿತಾ ಶ್ರೀರಾಮ್ ಮತ್ತು ವೃಂದದವರಿಂದ ನಾಮಸಂಕೀರ್ತನೆ ನಡೆಯಿತು.
ಮಠದ ಸಂಪ್ರದಾಯಕ್ಕೆ ಅನುಗುಣವಾಗಿ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರು ದೇವಾಲಯವನ್ನು ಪ್ರವೇಶಿಸಿದ ಬಳಿಕ ವ್ಯಾಖ್ಯಾನ ಸಿಂಹಾಸನದಲ್ಲಿ ಇರುವ ಶ್ರೀ ಶಾರದೆಯ ಮೂರ್ತಿಯನ್ನು ಬಂಗಾರದ ರಥದಲ್ಲಿ ಕುಳ್ಳಿರಿಸಿ ದೇವಾಲಯದ ಒಳಪ್ರಾಕಾರದಲ್ಲಿ ಮೂರು ಸುತ್ತು ವೇದ, ವಾದ್ಯ ಘೋಷಗಳೊಂದಿಗೆ ರಥೋತ್ಸವ ನೆರವೇರಿತು. ಶ್ರೀ ಶಾರದೆಗೆ ಅಭಿಮುಖವಾಗಿ ಇರಿಸಿದ ಸಿಂಹಾಸನದಲ್ಲಿ ಯತಿಗಳು ಆಸೀನರಾದ ಬಳಿಕ ವೇದಗಳ ಪಾರಾಯಣ, ಪಂಚಾಂಗ ಶ್ರವಣ, ಸಂಗೀತ, ಸರ್ವವಾದ್ಯಸೇವೆ ನಡೆಯಿತು.ದೇವಿಗೆ ಮಹಾಮಂಗಳಾರತಿ ನೆರವೇರಿತು.