ಹಂಪಾಪುರ: ಎಚ್.ಡಿ.ಕೋಟೆ ತಾಲೂಕು ಹಂಪಾಪುರ ಹೋಬಳಿಯ ಹಂಪಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎಂ.ಎಸ್.ಶೀಲಾ ಹಾಗೂ ಉಪಾಧ್ಯಕ್ಷರಾಗಿ ಸಿ.ಪ್ರೇಮಾ ಆಯ್ಕೆಯಾಗಿದ್ದಾರೆ. ದೇವಮ್ಮ ಹಾಗೂ ಸೌಭಾಗ್ಯ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ಎಂ. ಎಸ್.ಶೀಲಾ ಹಾಗೂ ಎಂ. ಮಹೇಶ್ ನಾಮಪತ್ರ ಸಲ್ಲಿಸಿದ್ದರು. 17 ಸದಸ್ಯರಿರುವ ಗ್ರಾಮ ಪಂಚಾಯಿತಿಗೆ ಚುನಾವಣೆ ನಡೆದು ಎಂ. ಎಸ್.ಶೀಲಾ ಅವರು 11 ಮತಗಳನ್ನು ಪಡೆದರೆ, ಎಂ. ಮಹೇಶ್ ಕೇವಲ 6 ಮತ ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಿ. ಪ್ರೇಮಾ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಗೊಂಡರು.
ಚುನವಣಾಧಿಕಾರಿ ಬೋರಯ್ಯ, ಸದಸ್ಯರಾದ ಸಾನು ಬೇಗಮ್, ಬಸವರಾಜಪ್ಪ, ಸುನಂದಾ, ರಾಜಮ್ಮ, ಸಿದ್ದರಾಜು, ಮಲ್ಲೂರು ನಾಯಕ, ಸಿ.ಋಷಭೇಂದ್ರ, ಸೌಭಾಗ್ಯಾ, ದೇವಮ್ಮ, ಪಿಡಿಒ ಸೌಮ್ಯಾ, ಮುಖಂಡರಾದ ಕುಮಾರ್, ಸಿದ್ದರಾಜು, ಸಿದ್ದಯ್ಯ, ಸ್ವಾಮಿಗೌಡ, ಅಣ್ಣೇಗೌಡ, ಹಾಗೂ ಗ್ರಾಮಸ್ಥರು ಇದ್ದರು.