ಹುಣಸೂರು: ನಿರುದ್ಯೋಗಿ ಯುವಕರು ಉದ್ಯೋಗಸ್ಥರಾಗಲು ಅಣಬೆ ಕೃಷಿ ಉತ್ತಮ ಮಾರ್ಗವಾಗಿದೆ ಎಂದು ಮೈಸೂರು ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಡಿ.ಕೆ.ಕೃಷ್ಣ ಯಾದವ್ ಸಲಹೆ ನೀಡಿದರು.
ನಗರದ ಹಾಲಗೆರೆಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಮತ್ತು ಮೈಸೂರು ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರದ ವಿಸ್ತರಣಾ ಶಿಕ್ಷಣ ಘಟಕದ ಸಹಯೋಗದಲ್ಲಿ ಅಣಬೆ ಕೃಷಿಯಲ್ಲಿ ಯಶಸ್ಸು ಸಾಧಿಸಿರುವ ಯುವರೈತ ಸುನಿಲ್ ಅವರ ಅಣಬೆ ಘಟಕದಲ್ಲಿ ಮಂಗಳವಾರ ಆಯೋಜಿಸಿದ್ದ ಮುಂಚೂಣಿ ಪ್ರಾತ್ಯಕ್ಷಿಕೆಯಲ್ಲಿ ಬೆಳೆದ ಅಣಬೆಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕೃಷಿಯ ಉಪ ಕಸುಬಾಗಿ ಅಣಬೆ ಕೃಷಿ ಗುರುತಿಸ್ಪಟ್ಟಿದೆ. ಸ್ವಾವಲಂಬಿ ಬದುಕಿಗೆ ಅಣಬೆ ಕೃಷಿ ಉತ್ತಮ ಆಯ್ಕೆಯಾಗಿದೆ. ಗುಣಮಟ್ಟದ ಆಹಾರವೆಂದು ಪರಿಗಣಿತವಾಗಿರುವ ಅಣಬೆ ಕೃಷಿಯನ್ನು ಯುವ ನಿರುದ್ಯೋಗಿಗಳು ಆಯ್ಕೆ ಮಾಡಿಕೊಂಡಲ್ಲಿ ಕೇಂದ್ರದ ವತಿಯಿಂದ ಅಣಬೆ ಕೃಷಿಯ ಬಗ್ಗೆ ಉಚಿತವಾಗಿ ತರಬೇತಿ ನೀಡಲಾಗುವುದು. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆಯುವ ಬಗ್ಗೆ, ಸಾವಯವ ಪದ್ಧತಿಯ ಬಳಕೆ, ಮಾರುಕಟ್ಟೆಯ ಆಯ್ಕೆಯ ಮಾರ್ಗಗಳೆಲ್ಲವನ್ನೂ ತಿಳಿಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ನಾಗನಹಳ್ಳಿ ಕೇಂದ್ರದ ಸಸ್ಯ ರೋಗಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಸಿ.ಗೋವಿಂದರಾಜು, ಮನೆಯಲ್ಲಿ ಕೋಣೆಯೊಂದು ಇದ್ದರೆ ಅಣಬೆ ಕೃಷಿ ಖಂಡಿತಾ ಮಾಡಬಹುದು. ದಿನನಿತ್ಯದ ಕುಟುಂಬ ನಿರ್ವಹಣೆಗೆ ಹೈನುಗಾರಿಕೆ ಹೇಗೆ ಸಹಾಯವಾಗಿದೆಯೋ ಹಾಗೆಯೇ ಆಣಬೆ ಕೃಷಿಯನ್ನು ಅವಲಂಬಿಸಬಹುದಾಗಿದೆ ಎಂದರು.
ಇದೇ ವೇಳೆ ಅಣಬೆ ಕೃಷಿಯಲ್ಲಿ ಸಾಧನೆಗೈದಿರುವ ಹಾಲಗೆರೆಯ ಯುವ ಕೃಷಿಕ ಸುನಿಲ್ ಅವರನ್ನು ಸನ್ಮಾನಿಸಲಾಯಿತು.
ವಿಸ್ತರಣಾ ಶಿಕ್ಷಣ ಘಟಕದ ಕ್ಷೇತ್ರ ಸಹಾಯಕ ಧರಣೇಶ, ಸಂಗೊಳ್ಳಿ ರಾಯಣ್ಣ ಸಂಘದ ಸದಸ್ಯ ಎಚ್.ಆರ್.ಅಶೋಕ್‌ಕುಮಾರ್, ಪ್ರಗತಿಪರ ರೈತ ಕೆ.ಸಿ.ವೆಂಕಟೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.