ಕೆ.ಆರ್.ನಗರ: ಸ್ವಾವಲಂಬಿ ಬದುಕನ್ನು ರೂಢಿಸಿಕೊಳ್ಳಲು ಎಲ್ಲರೂ ಮುಂದಾಗಬೇಕೆಂದು ತಹಸೀಲ್ದಾರ್ ಎಸ್.ಸಂತೋಷ್ ಹೇಳಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸಂಯುಕ್ತವಾಗಿ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಡಾ.ವೀರೇಂದ್ರ ಹೆಗ್ಗಡೆ ಅವರು ಅನೇಕ ಸಾಮಾಜಿಕ ಚಟುವಟಿಕೆ ಮಾಡುತ್ತಿದ್ದಾರೆ. ಇದರಿಂದ ಪ್ರೇರಣೆ ಪಡೆಯಬೇಕು ಎಂದವರು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಎಚ್.ಎಲ್.ಮುರಳೀಧರ ಮಾತನಾಡಿ, 19 ರೂ. ಹೂಡಿಕೆಯಿಂದ ಪ್ರಾರಂಭವಾದ ನಮ್ಮ ಸಂಸ್ಥೆ ಇಂದು 19 ಕೋಟಿ ರೂ.ಗಳ ವ್ಯವಹಾರ ಮಾಡಿ ಸ್ವಸಹಾಯ ಸಂಘಗಳನ್ನು ಬೆಳೆಸಿದೆ. ಇದರಲ್ಲಿ ಮಾತೆಯರ ಪಾತ್ರ ಬಹುದೊಡ್ಡದು ಎಂದರು.
ಕೇವಲ ಸಾಲಕ್ಕೆ ಸೀಮಿತವಾಗದ ನಮ್ಮ ಸಂಸ್ಥೆ ಕೆರೆಗಳ ಅಭಿವೃದ್ಧಿ, ದೇವಾಲಯಗಳ ಜೀರ್ಣೋದ್ಧಾರ ಮತ್ತು ಸಮುದಾಯ ಭವನಗಳಿಗೆ ಸಹಾಯ ಧನ ನೀಡುವ ಸೇವೆಯಲ್ಲಿದೆ. ಔಷಧ ವಿತರಣೆ, ವೃದ್ಧರಿಗೆ ಮಾಸಾಶನ ಸೇರಿದಂತೆ ನೊಂದವರ ನೆರವಿಗೆ ಸ್ಪಂದಿಸುತ್ತಿದೆ ಎಂದರು.
ಗಾವಡಗೆರೆಯ ಗುರುಲಿಂಗ ಜಂಗಮದೇವರ ಮಠದ ಶ್ರೀ ನಟರಾಜ ಸ್ವಾಮೀಜಿ ಆಶೀರ್ವಚನ ನೀಡಿದರು. ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜಾ ಸಮಿತಿ ಅಧ್ಯಕ್ಷೆ ನಾಗರತ್ನ, ಖಜಾನಾಧಿಕಾರಿ ಶಿವಲಿಂಗೇಗೌಡ, ಪಿಎಸ್‌ಐ ಚಂದ್ರಹಾಸ, ಪುರಸಭಾ ಮಾಜಿ ಸದಸ್ಯೆ ನಾಗರತ್ನಮ್ಮ, ಸಂಸ್ಥೆಯ ತಾಲೂಕು ಯೋಜನಾಧಿಕಾರಿ ರಮೇಶ್, ಸೇವಾ ಪ್ರತಿನಿಧಿಗಳಾದ ಮಮತಾ, ಭವಾನಿ ಇತರರು ಇದ್ದರು.