ನ್ಯೂಸ್

ಸ್ವಾಧೀನಕ್ಕೆ ಪಡೆದ ಭೂಮಿಗೆ ಪರಿಹಾರ ನೀಡಲಿ:  ದೇವರಾಜೇಗೌಡ ಆಗ್ರಹ

ಹಾಸನ: ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಭೂ ಸ್ವಾಧೀನಪಡಿಸಿಕೊಂಡಿರುವ ಜಮೀನನ್ನು ಅಭಿವೃದ್ಧಿಪಡಿಸದೆ ಹಾಗೂ ರೈತರಿಗೆ ಭೂ ಪರಿಹಾರ ನೀಡದೆ ಅನ್ಯಾಯವೆಸಗುತ್ತಿದೆ ಎಂದು ವಕೀಲರು ಹಾಗೂ ಕಾಂಗ್ರೆಸ್ ಜಿಲ್ಲಾ ಘಟಕದ ಮಾಧ್ಯಮ ವಕ್ತಾರ ದೇವರಾಜೇಗೌಡ ಆರೋಪಿಸಿದರು.

ತಾಲೂಕಿನ ಗವೇನಹಳ್ಳಿ, ದೊಡ್ಡ ಹೊನ್ನೇನಹಳ್ಳಿ, ಕಸ್ತೂರವಳ್ಳಿ, ಬೂಸ್ತೇನಹಳ್ಳಿ ಸೇರಿದಂತೆ ಒಟ್ಟು 7 ಗ್ರಾಮಗಳ ರೈತರ ಭೂಮಿಯನ್ನು ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ, 2007ರಲ್ಲಿ ಭೂ ಸ್ವಾಧೀನ ಮಾಡಿಕೊಂಡಿತ್ತು. ಆದರೆ ರೈತರಿಗೆ ಭೂ ಪರಿಹಾರವನ್ನು ನೀಡದೆ ಭೂಮಿಯನ್ನು ಅಭಿವೃದ್ಧಿ ಪಡಿಸದೆ ವಿಳಂಬ ಮಾಡುತ್ತಿದ್ದು, ಇದರಿಂದ ಹಲವು ರೈತರಿಗೆ ಸಂಕಷ್ಟ ಎದುರಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೆಐಎಡಿಬಿ ವಿರುದ್ಧ ಹೈಕೋರ್ಟ್‌ನಲ್ಲಿ ರೈತರು ಪ್ರಕರಣ ದಾಖಲಿಸಿದ ನಂತರ ನ್ಯಾಯಾಲಯವು ಭೂ ಸ್ವಾಧೀನಪಡಿಸಿಕೊಂಡ ಸ್ವತ್ತನ್ನು ಅಭಿವೃದ್ಧಿಪಡಿಸಿ ಪ್ರತಿ ಎಕರೆಗೆ 10,781 ಅಡಿಯಂತೆ ನಿವೇಶನವನ್ನು ರೈತರಿಗೆ ನೀಡುವಂತೆ ಸೂಚನೆ ನೀಡಿದೆ. ಆದರೆ ನ್ಯಾಯಾಲಯದ ಆದೇಶಕ್ಕೆ ಯಾವುದೇ ಮನ್ನಣೆ ನೀಡದ ಕೆಐಎಡಿಬಿ ಅಧಿಕಾರಿಗಳು ಉದಾಸೀನ ಧೋರಣೆ ಅನುಸರಿಸಿದ್ದು ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.

ಈ ಪ್ರಕರಣ ಸಂಬಂಧ ಲೋಕಸಭಾ ಸದಸ್ಯರು ಸಂಬಂಧಪಟ್ಟ ಸಚಿವರು, ಉಸ್ತುವಾರಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಈ ನಡುವೆ 2025 ಮಾರ್ಚ್ 7 ರಂದು ಹೈಕೋಟ್ 90 ದಿನಗಳ ಒಳಗಾಗಿ ಭೂ ಸ್ವಾದೀನಪಡಿಸಿಕೊಂಡ ಭೂಮಿಯಲ್ಲಿ ಕಾಮಗಾರಿಯನ್ನು ಮುಗಿಸಬೇಕು ಎಂದು ಆದೇಶ ನೀಡಿದರೂ ಸಹ ಅಧಿಕಾರಿಗಳು ಇದುವರೆಗೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ದೂರಿದರು.

ಈ ಹಿಂದೆಯೂ ಸರ್ಕಾರ ಐಐಟಿ ಸ್ಥಾಪನೆಗೆ 334 ಎಕರೆ ಜಾಗವನ್ನು ಹೊರತುಪಡಿಸಿ ಉಳಿದ ಭೂಮಿಯನ್ನು ಅಭಿವೃದ್ಧಿಪಡಿಸುವಂತೆ ಆದೇಶ ನೀಡಿದರೂ ಸಹ ಇಲ್ಲಿನ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಈಗಾಗಲೇ ಸರ್ಕಾರದಿಂದ 99 ಕೋಟಿ ರೂ. ಕ್ರಿಯಾ ಯೋಜನೆ ಹಣವನ್ನು ಬಿಡುಗಡೆ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಪ್ರಕರಣವನ್ನು ಸಚಿವರಾದ ಎಂ.ಬಿ. ಪಾಟೀಲ್ ಅವರ ಗಮನಕ್ಕೆ ತಂದ ನಂತರ ಅವರು ಇಲ್ಲಿನ ಅಧಿಕಾರಿಗಳಿಗೆ ಕ್ರಮಕ್ಕೆ ಆದೇಶ ನೀಡಿದರು. ಇದುವರೆಗೂ ಭೂ ಸ್ವಾಧೀನಪಡಿಸಿಕೊಂಡ ಜಾಗದಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಆದೇಶಕ್ಕೂ ಅಧಿಕಾರಿಗಳು ಬೆಲೆ ಕೊಡುತ್ತಿಲ್ಲ. ಮುಂದಿನ 10 ದಿನದಲ್ಲಿ ಕೆಐಎಡಿಬಿ ಅಧಿಕಾರಿಗಳು ಭೂ ಸ್ವಾಧೀನಪಡಿಸಿಕೊಂಡ ಜಾಗದಲ್ಲಿ ಕಾಮಗಾರಿಯನ್ನು ಪ್ರಾರಂಭಿಸದೆ ಇದ್ದರೆ ಕೆಐಇಡಿಬಿ ಜಿಲ್ಲಾ ಕೇಂದ್ರದ ಕಚೇರಿಯ ಎದುರು ರೈತರೆಲ್ಲ ಕುಟುಂಬ ಸಮೇತರಾಗಿ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಸುಬ್ಬೇಗೌಡ, ಸ್ವಾಮಿ, ತಾರಾನಾಥ್, ಹರೀಶ್, ಜಯರಾಮ್, ನಾಗೇಶ್ ಇದ್ದರು.