ನ್ಯೂಸ್

ಸ್ವಾತಂತ್ರ್ಯೋತ್ಸವದ ಮೂಲಕ ಪರಿಸರದ ಅರಿವು

ಹನಗೋಡು: ಅಮೃತ ಸರೋವರ ಕೆರೆ ಆವರಣದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಪರಿಸರ ಹಾಗೂ ನೀರಿನ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ಸಹಕಾರಿಯಾಗಿದೆ ಎಂದು ನೇರಳಕುಪ್ಪೆ ಗ್ರಾ.ಪಂ.ಅಧ್ಯಕ್ಷೆ ಗೀತಾಸುರೇಶ್ ಹೇಳಿದರು.


ಹನಗೋಡು ಹೋಬಳಿಯ ಅಬ್ಬೂರು ಗ್ರಾಮದ ಕೆರೆ ಆವರಣದಲ್ಲಿ 77ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಮೃತ ಸರೋವರದಡಿಯಲ್ಲಿ ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುತ್ತಿರುವುದು ಹಾಗೂ ಅಮೃತ ಸರೋವರ ಕೆರೆ ದಡದಲ್ಲಿ ಗಿಡ ಮರಗಳನ್ನು ಬೆಳೆಸಿ, ಅರಣ್ಯ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ಸಹಕಾರಿಯಾಗಿದೆ. ಗ್ರಾಮಸ್ಥರು ಹಾಗೂ ರೈತರು ಕೆರೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ ಎಂದು ತಿಳಿದರು. ಈ ಸಂದರ್ಭದಲ್ಲಿ ಅಮೃತ ಸರೋವರ ಕೆರೆ ಆವರಣದ ಸುತ್ತ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಸುತ್ತ ರಕ್ಷಾಕವಚ ಹಾಕಿ ಆವರಣವನ್ನು ಸ್ವಚ್ಛ ಮಾಡಲಾಯಿತು.


ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ರುಕ್ಮಿಣಿ ಸುರೇಶ್, ಸದಸ್ಯರಾದ ಕುಮಾರ್, ಅಮಾಸೇಗೌಡ, ಮಾದೇಗೌಡ, ಉದಯ, ರಂಗಯ್ಯ, ಜವರಮ್ಮ, ನಾಣ್ಯಕುಮಾರಿ, ಚಂದ್ರಮ್ಮ, ಮೈಮುನ್ನಿಸ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವರಾಜ್ ಕಾರ್ಯದರ್ಶಿ ಗೀತಾ ಸೇರಿದಂತೆ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.