ಎನ್.ಆರ್.ಪುರ: ವೆಂಕಟೇಶ್ವರ ಕೆರೆ ಅಭಿವೃದ್ಧಿ ಸಂಘದಿಂದ 7 ಸ್ವಸಹಾಯ ಸಂಘಗಳಿಗೆ ತಲಾ 15 ಸಾವಿರ ರೂ. ಸೇರಿ ಒಟ್ಟು 1.5 ಲಕ್ಷ ರೂ. ಸುತ್ತು ನಿಧಿ ನೀಡುತ್ತಿದ್ದು ಸಂಘದ ಸದಸ್ಯರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶೆಟ್ಟಿಕೊಪ್ಪ ವೆಂಕಟೇಶ್ವರ ಕೆರೆ ಅಭಿವೃದ್ಧಿ ಸಂಘದ ಅಧ್ಯಕ್ಷ ಎನ್.ಎಂ.ಕಾಂತರಾಜ್ ತಿಳಿಸಿದರು.
ಶನಿವಾರ ಶೆಟ್ಟಿಕೊಪ್ಪದ ವೆಂಕಟೇಶ್ವರ ಕೆರೆ ಅಭಿವೃದ್ಧಿ ಸಂಘದ ಕಚೇರಿಯ ಆವರಣದಲ್ಲಿ ಸ್ವಸಹಾಯ ಸಂಘಗಳಿಗೆ ಸುತ್ತು ನಿಧಿ ಚೆಕ್ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಜಲ ಸಂವರ್ಧನಾ ಯೋಜನೆಯಡಿಯಲ್ಲಿ ಶೆಟ್ಟಿಕೊಪ್ಪ ವೆಂಕಟೇಶ್ವರ ಕೆರೆ ಹಾಗೂ ಹಿರೇಬಿಸು ರಾಮನಕೆರೆ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡಿದ್ದು ಹಲವು ಕಾಮಗಾರಿಯನ್ನು ಈಗಾಗಲೇ ಮಾಡಲಾಗಿದೆ ಎಂದರು.
ಜಿಲ್ಲಾಧಿಕಾರಿಗಳು ಈ 2 ಕೆರೆಗಳನ್ನು ಅಭಿವೃದ್ಧಿಪಡಿಸಲು ಈ ಭಾಗದ ಅಚ್ಚುಕಟ್ಟುದಾರ ರೈತರಿಗೆ ವಹಿಸಿದ್ದಾರೆ. ಕೆರೆಯಲ್ಲಿ ಮೀನು ಸಾಕಾಣಿಕೆಗೆ ಕೆರೆ ಅಭಿವೃದ್ಧಿ ಸಂಘವು ಕ್ರಮ ಕೈಗೊಂಡಿದೆ. ಕೆರೆಗಳ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿಯಿಂದ ನರೇಗಾ ಯೋಜನೆಯಡಿ ಹೂಳೆತ್ತಲು ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಶೈಲಾ ಮಹೇಶ್ ಮಾತನಾಡಿ, ಸರ್ಕಾರ ನೀಡುವ ಸುತ್ತು ನಿಧಿಯನ್ನು ಹಾಗೂ ಗ್ರಾಪಂ ಮುಖಾಂತರ ನೀಡುವ ಸಂಜೀವಿನಿ ಸಂಘಗಳ ಸಾಲ, ಸೌಲಭ್ಯವನ್ನು ಸದಸ್ಯರು ಸದುಪಯೋಗ ಪಡೆದುಕೊಂಡು ಜೀವನದಲ್ಲಿ ಆರ್ಥಿಕ ಪ್ರಗತಿ ಸಾಧಿಸಬೇಕು ಎಂದರು.
ವೆಂಕಟೇಶ್ವರ ಕೆರೆ ಅಭಿವೃದ್ಧಿ ಸಂಘದ ಹಿರಿಯ ಸದಸ್ಯ ಬಿ.ಕೆ.ಜಾನಕಿರಾಂ ಮಾತನಾಡಿ, ಕಳೆದ 10 ವರ್ಷದಿಂದ ಪ್ರತಿಯೊಂದು ಸ್ವಸಹಾಯ ಸಂಘಕ್ಕೂ ತಲಾ 15 ಸಾವಿರ ರೂ. ಸುತ್ತುನಿಧಿ ವಿತರಿಸಲಾಗುತ್ತಿದೆ. ಸಂಘದ ಸದಸ್ಯರು ತಮ್ಮ ಆದಾಯೋತ್ಪನ್ನ ಚಟುವಟಿಕೆಗಳಿಗೆ ಇದನ್ನು ಬಳಸಿಕೊಂಡು ನಿಗದಿತ ಸಮಯಕ್ಕೆ ಮರುಪಾವತಿ ಮಾಡಬೇಕು ಎಂದು ಸಲಹೆ ನೀಡಿದರು.
ಸ್ವಸಹಾಯ ಸಂಘದವರಿಗೆ ಸುತ್ತು ನಿಧಿ ವಿತರಿಸಲಾಯಿತು. ಕಾರ್ಯಕ್ರಮದ ನಂತರ ಸಂಘದ ಸದಸ್ಯರು ಶ್ರಮದಾನದ ಮೂಲಕ ಕೆರೆಯದಂಡೆಯನ್ನು ಸ್ವಚ್ಛಗೊಳಿಸಿದರು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಉಪಾಧ್ಯಕ್ಷ ಸುನೀಲ್‌ಕುಮಾರ್, ಸದಸ್ಯರಾದ ಎ.ಬಿ.ಮಂಜುನಾಥ್, ಪೂರ್ಣಿಮ, ಕೆರೆ ಅಭಿವೃದ್ಧಿ ಸಂಘದ ಉಪಾಧ್ಯಕ್ಷ ಎ.ಜೆ.ವಿಜಯನ್, ಸಂಘದ ಕಾರ್ಯದರ್ಶಿ ಸಿ.ವೆಂಕಟೇಶ್, ಶೆಟ್ಟಿಕೊಪ್ಪ ಎಂ.ಮಹೇಶ್, ನಿರ್ದೇಶಕರಾದ ಬಿ.ಕೆ.ರವೀಂದ್ರ, ಕೆ.ಜಿ.ಲೋಹಿತಾಶ್ವ, ಎ.ಬಿ.ಚಂದ್ರಶೇಖರ್, ಎಲ್ದೋ, ಡಿ.ಲೋಹಿತಾಶ್ವ ಇದ್ದರು.