ನ್ಯೂಸ್

ಸ್ವಚ್ಛತೆ ಮತ್ತು ನಿರ್ವಹಣೆ ಇಲ್ಲದಿರುವ ಎಸ್.ಎನ್.ಆರ್.ಆಸ್ಪತ್ರೆಯ ವಸತಿ ಗೃಹಗಳು / ರಾತ್ರಿ ವೇಳೆ ಹಾವು ಚೇಳುಗಳ ಕಾಟ / ಚಂರAಡಿಗಳಲ್ಲಿ ತುಂಬಿರುವ ತ್ಯಾಜ್ಯ / ಆರೋಗ್ಯ ಮತ್ತು ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಸಿಬ್ಬಂದಿಗೆ ರಕ್ಷಣೆ ಇಲ್ಲ

ವಿಜಯವಾಣಿ ಸುದ್ದಿಜಾಲ ಕೋಲಾರ

ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಆರೋಗ್ಯ ಇಲಾಖೆಯು ತಮ್ಮ ಇಲಾಖೆಯ ವಸತಿ ಗೃಹಗಳ ಬಳಿಯೇ ಸ್ವಚ್ಛತೆ ಇಲ್ಲದಂತಾಗಿದೆ. ವಸತಿ ಗೃಹಗಳ ನಿರ್ವಹಣೆ ಇಲ್ಲದೆ ಮಳೆ ಬಂದರೆ ಸೋರುತ್ತಿದೆ. ಬೀದಿ ದೀಪಗಳಿಲ್ಲದೆ ರಾತ್ರಿ ವೇಳೆ ಹಾವು ಚೇಳುಗಳ ಕಾಟದಿಂದ ವಸತಿ ಗೃಹಗಳಿಂದ ಆಸ್ಪತ್ರೆಗೆ ಬರಬೇಕಾದರೆ ಟಾರ್ಚ್ ಹಿಡಿದು ಬರುವಂತಹ ದುಃಸ್ಥಿತಿ ಸಿಬ್ಬಂದಿಯವರದ್ದಾಗಿದೆ.

ನಗರದ ಎಸ್.ಎನ್.ಆರ್. ಆಸ್ಪತ್ರೆಯ ಆವರಣದಲ್ಲಿಯೇ ಇರುವ ವಸತಿ ಗೃಹಗಳ ದುಃಸ್ಥಿತಿ ಇದಾಗಿದೆ. ಚರಂಡಿಗಳು ಸ್ವಚ್ಛತೆ ಕಾಣದೆ ಕಸಕಡ್ಡಿ ಚರಂಡಿ ತುಂಬಿ ರಸ್ತೆಗಳಲ್ಲಿ ರಾಶಿ ರಾಶಿ ಬಿದ್ದಿವೆ. ಬೀದಿ ದೀಪಗಳು ಕೆಟ್ಟು ನಿಂತು ತಿಂಗಳುಗಳೇ ಆಗಿದ್ದು, ದುರಸ್ಥಿ ಕಂಡಿಲ್ಲ. ಸುಮಾರು ೫೪ ವಸತಿ ಗೃಹಗಳು ದುರಸ್ಥಿ ಆಗಬೇಕಾಗಿದೆ. ದುರಸ್ಥಿ ಮತ್ತು ನಿರ್ವಹಣೆ ಇಲ್ಲದೆ ಇರುವುದರಿಂದ ಕೆಲವು ವೈದ್ಯರು ಮತ್ತು ಸಿಬ್ಬಂದಿ ವಸತಿಗೃಹಗಳನ್ನು ಖಾಲಿ ಮಾಡಿದ್ದಾರೆ.

ಇನ್ನು ಕೆಲವರು ವಾಸ ಮಾಡಲು ಆಗದೇ ಇರುವ ಕಾರಣ ತಮ್ಮ ಸಂಬAಧಿಕರಿಗೆ ಮತ್ತು ಅರೆಗುತ್ತಿಗೆ ಸಿಬ್ಬಂದಿಗೆ ನೀಡಿದ್ದಾರೆ. ವೈದ್ಯರು ವಾಸಿಸಲು ಯೋಗ್ಯವಲ್ಲದೇ ಇರುವುದರಿಂದ ಕೆಲವು ವೈದ್ಯರು ಖಾಸಗಿಯಾಗಿ ಬಾಡಿಗೆ ಪಡೆದು ಬೇರೆ ಕಡೆಯಿಂದ ಆಸ್ಪತ್ರೆಗೆ ಬರುವಂತಾಗಿದೆ.

ದಾದಿಯರು ಮತ್ತು ಇತರೆ ಸಿಬ್ಬಂದಿ ವರ್ಗದವರು ಹೆಚ್ಚಾಗಿ ವಾಸಿಸುತ್ತಿದ್ದು, ರಾತ್ರಿ ವೇಳೆ ಆಸ್ಪತ್ರೆಗೆ ಬರಬೇಕಾದರೆ ಟಾರ್ಚ್ ಹಿಡಿದು ಬರುವಂತಹ ಪರಿಸ್ಥಿತಿ ಆಗಿದೆ. ವಸತಿ ಗೃಹಗಳ ಪಕ್ಕದಲ್ಲಿ ದೊಡ್ಡ ರಾಜಕಾಲುವೆ ಹಾದು ಹೋಗಿದ್ದು, ರಾಜಕಾಲುವೆಯಲ್ಲಿ ತ್ಯಾಜ್ಯ ತುಂಬಿ ಒಂದು ಕಡೆ ದುರ್ವಾಸನೆಯಾದರೆ ಮತ್ತೊಂದಡೆ ಹಾವು ಚೇಳುಗಳು ವಸತಿ ಗೃಹಗಳ ಆವರಣಕ್ಕೆ ಬರುವಂತಾಗಿದೆ ಎಂದು ಹೆಸರು ಹೇಳಲು ಇಚ್ಛಸದ ಸಿಬ್ಬಂದಿಯವರ ಆರೋಪವಾಗಿದೆ.

ಮಳೆ ಬಂದರೆ ಸೋರುವಂತಹ ಪರಿಸ್ಥಿತಿ ಉಂಟಾಗಿದೆ. ಗೋಡೆಗಳು ಬಿರುಕು ಬಿಟ್ಟಿವೆ. ಮಳೆ ಜೋರಾಗಿ ಬಂದರೆ ಎಲ್ಲಿ ವಸತಿ ಗೃಹಗಳು ಬೀಳುತ್ತವೆ ಎಂಬ ಭೀತಿಯಲ್ಲಿ ದಿನಕಳೆಯುವಂತಾಗಿದೆ. ಕನಿಷ್ಟ ಬೀದಿ ದೀಪಗಳನ್ನಾದರೂ ಅಳವಡಿಸಿದರೆ ರಾತ್ರಿ ವೇಳೆ ಸುಗಮವಾಗಿ ಓಡಾಡಲು ಸಾಧ್ಯವಾಗುತ್ತದೆಂಬುದು ಸಿಬ್ಬಂದಿಯ ಅಳಲಾಗಿದೆ.

ಬಾಕ್ಸ್

ಎಸ್.ಎನ್.ಆರ್.ಆಸ್ಪತ್ರೆ ಮತ್ತು ವಸತಿ ಗೃಹಗಳನ್ನು ನವೀಕರಣ ಮಾಡಲು ೯ ಕೋಟಿ ರೂ.ಗಳು ಮಂಜೂರಾಗಿದೆ. ಕಳೆದ ೬ ತಿಂಗಳಿAದ ಆಸ್ಪತ್ರೆ ನವೀಕರಣ ನಡೆಯುತ್ತಿದೆ. ನವೀಕರಣ ಕುಂಟುತ್ತಾ ನಡೆಯುತ್ತಿರುವುದರಿಂದ ಅಲ್ಲಿಯೂ ರೋಗಿಗಳಿಗೆ ಕಿರಿಕಿರಿಯಾಗಿದೆ. ಆಪರೋಷನ್ ಥಿಯೇಟರ್ ವಾರಕ್ಕೆ ೩ ದಿನ ಮಾತ್ರ ಲಭ್ಯವಿದೆ. ರಿಪೇರಿ ನಡೆಯುತ್ತಿದೆ ಎಂದು ಸಬೂಬು ಹೇಳಿಕೊಂಡು ಆಪರೇಷನ್ ವಾರ್ಡ್ ಲಭ್ಯವಿಲ್ಲ ಎಂದು ರೋಗಿಗಳನ್ನು ತಿರುಗಾಡಿಸುವಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕೋಟ್

ಶೇ.೪೦ ರಷ್ಟು ಆಸ್ಪತ್ರೆ ವಾರ್ಡುಗಳನ್ನು ನವೀಕರಿಸಲಾಗಿದೆ. ಇನ್ನು ಶೇ.೬೦ ರಷ್ಟು ವಾರ್ಡುಗಳ ನವೀಕರಣ ಮಾಡಬೇಕಾಗಿದೆ. ವಸತಿ ಗೃಹಗಳ ನವೀಕರಣವೂ ಇದರಲ್ಲಿ ಸೇರಿದೆ. ಇನ್ನು ೨೦ ದಿನಗಳ ನಂತರ ವಸತಿ ಗೃಹ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಆಸ್ಪತ್ರೆಯಾದ ಕಾರಣ ನವೀಕರಣದ ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ. ರೋಗಿಗಳನ್ನು ಕೊಠಡಿಗಳಿಂದ ಸ್ಥಳಾಂತರಿಸಿ ಮತ್ತೆ ನವೀಕರಣ ಮಾಡಬೇಕಾಗಿದೆ. ಗುಣಮಟ್ಟದಿಂದ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಅದರಿಂದ ತಡವಾಗಿದೆ. ಈಗಾಗಲೇ ಕಾಮಗಾರಿಗಳನ್ನು ಪ್ರಾರಂಭಿಸಿ ೬ ತಿಂಗಳಾಗಿದೆ. ಇನ್ನು ೬ ತಿಂಗಳ ಕಾಲಾವಕಾಶ ಬೇಕಾಗಿದೆ. ವಸತಿ ಗೃಹಗಳ ಬಳಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗುವುದು. ವಸತಿ ಗೃಹಗಳ ಪಕ್ಕದಲ್ಲಿ ಹಾದು ಹೋಗಿರುವ ರಾಜಕಾಲುವೆ ಸ್ವಚ್ಛತೆ ಮಾಡುವುದು ನಗರಸಭೆಯವರ ಕರ್ತವ್ಯವಾಗಿದೆ.

-ರಾಮಚಂದ್ರ, ಇಂಜಿನೀಯರ್, ಎಸ್.ಎನ್.ಆರ್. ಆಸ್ಪತ್ರೆ.

ಕೋಟ್

ವಸತಿ ಗೃಹಗಳ ಸ್ವಚ್ಛತೆ ಮತ್ತು ನಿರ್ವಹಣೆ ಇಲ್ಲದೇ ಇರುವುದು ನನ್ನ ಗಮನಕ್ಕೆ ಬಂದಿಲ್ಲ. ಈಗಾಗಲೇ ನವೀಕರಣಗೊಳ್ಳುತ್ತಿದೆ. ಚರಂಡಿಗಳ ಸ್ವಚ್ಛತೆ ಬಗ್ಗೆ ಗಮನ ಹರಿಸಲಾಗುವುದು. ಬೇರೆಯವರು ಸಿಬ್ಬಂದಿಯ ಹೆಸರಿನಲ್ಲಿ ವಾಸವಿದ್ದರೆ ನವೀಕರಣಗೊಂಡ ನಂತರ ಖಾಲಿ ಮಾಡಿಸಲಾಗುವುದು.

-ಜಗದೀಶ್, ಜಿಲ್ಲಾ ಸರ್ಜನ್, ಎಸ್.ಎನ್.ಆರ್.ಆಸ್ಪತ್ರೆ.

ಚಿತ್ರ ೧೬ ಕೆ.ಎಲ್.ಆರ್. ೦೨ : ತ್ಯಾಜ್ಯ ವಿಲೇವಾರಿಯಾಗದೆ ವಸತಿ ಗೃಹಗಳ ಬಳಿಯೇ ರಾಶಿ ಬಿದ್ದಿರುವುದು.

ಚಿತ್ರ ೧೬ ಕೆ.ಎಲ್.ಆರ್. ೦೨ಎ : ವಸತಿ ಗೃಹಗಳು ನಿರ್ವಹಣೆ ಇಲ್ಲದೆ ಒಳಗಡೆಯ ಗೋಡೆಗಳು ಮಳೆಗೆ ಒದ್ದೆಯಾಗಿರುವುದು.

ಚಿತ್ರ ೧೬ ಕೆ.ಎಲ್.ಆರ್. ೦೨ಬಿ : ವಸತಿ ಗೃಹಗಳು ನಿರ್ವಹಣೆ ಇಲ್ಲದ ಕಾರಣ ಬಾಡಿಗೆ ಇರುವ ಸಿಬ್ಬಂದಿ ಬೀಗ ತೆಗೆಯದೆ ಬಿಟ್ಟಿರುವುದು.

ಚಿತ್ರ ೧೬ ಕೆ.ಎಲ್.ಆರ್. ೦೨ಸಿ : ಜಗದೀಶ್, ಜಿಲ್ಲಾ ಸರ್ಜನ್, ಎಸ್.ಎನ್.ಆರ್.ಆಸ್ಪತ್ರೆ.