ಕಡೂರಿನಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿ ನಿವೃತ್ತ ಪೌರಕಾರ್ಮಿಕರನ್ನು ಶಾಸಕ ಕೆ.ಎಸ್.ಆನಂದ್ ಸನ್ಮಾನಿಸಿದರು. ಭಂಡಾರಿ ಶ್ರೀನಿವಾಸ್, ಮಂಜುಳಾ ಚಂದ್ರು, ರಮೇಶ್, ಮಂಜುನಾಥ್, ಲತಾ, ಸುಧಾ, ತಿಮ್ಮಯ್ಯ ಇತರರಿದ್ದರು. 
ನ್ಯೂಸ್

ಸ್ವಚ್ಛತೆ ಕಾಪಾಡುವ ಪೌರಕಾರ್ಮಿಕರ ಗೌರವಿಸಿ

ಕಡೂರು: ಆರೋಗ್ಯಕರ ಪಟ್ಟಣವನ್ನಾಗಿಸಲು ಪೌರಕಾರ್ಮಿಕರ ಪರಿಶ್ರಮ ಅಪಾರ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಪಟ್ಟಣದ ವೇದಾ ಪಾರ್ಕ್ ಆವರಣದಲ್ಲಿ ಮಂಗಳವಾರ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪಟ್ಟಣ ವ್ಯಾಪ್ತಿ ವಿಸ್ತಾರಗೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಪೌರಕಾರ್ಮಿಕರು ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವುದು ಶ್ಲಾಘನೀಯ. ಕರೊನಾ ಸಂದರ್ಭದಲ್ಲಿ ಜೀವವನ್ನು ಪಣಕ್ಕಿಟ್ಟು ಕಾರ್ಯನಿರ್ವಹಿಸಿದ್ದು ಪ್ರತಿಯೊಬ್ಬರನ್ನೂ ಗೌರವಿಸಬೇಕಾಗಿದೆ ಎಂದರು.

ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಪೌರ ಕಾರ್ಮಿಕರು ಪಟ್ಟಣದ ಜೀವನಾಡಿಗಳಾಗಿದ್ದಾರೆ. ಪೌರಕಾರ್ಮಿಕರು ಆರೋಗ್ಯವಾಗಿದ್ದರೆ ಮಾತ್ರ ಪಟ್ಟಣದ ಆರೋಗ್ಯ ಕಾಪಾಡಲು ಸಾಧ್ಯ. ದುಶ್ಚಟಗಳನ್ನು ತ್ಯಜಿಸಿ ಆರೋಗ್ಯದ ಕಡೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದೆ ಎಂದರು.

ಪುರಸಭೆಯಿಂದ ಪೌರಕಾರ್ಮಿಕರಿಗಾಗಿ ಕೆ.ಹೊಸಳ್ಳಿ ಬಳಿ ಜಾಗ ಮೀಸಲಿಡಲಾಗಿದೆ. ನನ್ನ ಅವಧಿಯಲ್ಲಿ ಕ್ಷೇತ್ರದ ಶಾಸಕರ ಸಹಕಾರ ಪಡೆದು ಪೌರಕಾರ್ಮಿಕರಿಗೆ ನಿವೇಶನ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ಎಂದರು.

ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು ಮಾತನಾಡಿ, ಸೈನಿಕರು ದೇಶವನ್ನು ರಕ್ಷಿಸುತ್ತಾರೆ. ಪಟ್ಟಣದ ನಾಗರಿಕರ ಆರೋಗ್ಯವನ್ನು ರಕ್ಷಿಸುವ ಪೌರ ಕಾರ್ಮಿಕರು ಅವರ ಆರೋಗ್ಯದ ಕಡೆಗೂ ಗಮನ ಹರಿಸಬೇಕು ಎಂದು ಹೇಳಿದರು.

ನಿವೃತ್ತ ಪೌರಕಾರ್ಮಿಕರು ಹಾಗೂ ಸಿಬ್ಬಂದಿಯನ್ನು ಗೌರವಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಾದ ಕಾರ್ಮಿಕರಿಗೆ ಬಹುಮಾನ ಹಾಗೂ ಸರ್ಕಾರದ ವಿಶೇಷ ಭತ್ಯೆ ವಿತರಿಸಲಾಯಿತು. ಪೌರಕಾರ್ಮಿಕರ ಸಂಘದ ಅಧ್ಯಕ್ಷ ಗಿರೀಶ್, ಉಪಾಧ್ಯಕ್ಷ ತಿಮ್ಮಯ್ಯ, ಮುಖ್ಯಾಧಿಕಾರಿ ಮಂಜುನಾಥ್, ಸದಸ್ಯರಾದ ಈರಳ್ಳಿ ರಮೇಶ್, ಸೈಯಾದ್ ಯಾಸೀನ್, ವಿಜಯಾ ಚಿನ್ನರಾಜು, ಸುಧಾ ಉಮೇಶ್, ಯತಿರಾಜ್, ಗೋವಿಂದು, ಪುಷ್ಪಲತಾ ಮಂಜುನಾಥ್, ಲತಾ ರಾಜು, ಸಂದೇಶ್‌ಕುಮಾರ್, ಮೋಹನ್‌ನಾಯ್ಕ, ಪದ್ಮಾ ಶಂಕರ್, ಪಂಗ್ಲಿ ಮಂಜುನಾಥ್, ಪರಿಸರ ಅಭಿಯಂತರ ಶ್ರೇಯಸ್‌ಕುಮಾರ್, ಶ್ರೀನಿವಾಸ್‌ಮೂರ್ತಿ ಇತರರಿದ್ದರು.