ನ್ಯೂಸ್

‘ಸ್ವಚ್ಛತಾ ವಾಹಿನಿ’ಗೆ ಮಹಿಳಾ ಸಾರಥ್ಯ

ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಕಸ ಸಂಗ್ರಹಣೆ ವಾಹನಗಳನ್ನು ಮಹಿಳಾ ಡ್ರೈವರ್‌ಗಳು ಚಾಲನೆ ಮಾಡುತ್ತಿದ್ದು, ನಾರಿ ಸಬಲೀಕರಣಕ್ಕೆ ಹೊಸತೊಂದು ಭಾಷ್ಯ ಬರೆಯುತ್ತಿದ್ದಾರೆ.

ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಕಸ ಸಂಗ್ರಹಣೆ ವಾಹನಗಳನ್ನು ಮಹಿಳಾ ಡ್ರೈವರ್‌ಗಳು ಚಾಲನೆ ಮಾಡುತ್ತಿದ್ದು, ನಾರಿ ಸಬಲೀಕರಣಕ್ಕೆ ಹೊಸತೊಂದು ಭಾಷ್ಯ ಬರೆಯುತ್ತಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ 256 ಗ್ರಾಮ ಪಂಚಾಯಿತಿಗಳಿವೆ. ಈಗಾಗಲೇ 180 ಪಂಚಾಯಿತಿಗಳಲ್ಲಿ ಮಹಿಳಾ ಡ್ರೈವರ್‌ಗಳು ‘ಸ್ವಚ್ಛತಾ ವಾಹಿನಿ’ ವಾಹನಗಳನ್ನು ಚಾಲನೆ ಮಾಡುತ್ತಿದ್ದಾರೆ. ಉಳಿದಿರುವ 76 ಗ್ರಾಮ ಪಂಚಾಯಿತಿಗಳಲ್ಲಿ ಚಾಲಕರ ಆಯ್ಕೆಯ ಪ್ರಕ್ರಿಯೆ ನಡೆಯುತ್ತಿದೆ. ಎಚ್.ಡಿ.ಕೋಟೆ ತಾಲೂಕಿನಲ್ಲಿ 26 ಗ್ರಾಪಂಗಳಲ್ಲಿ 25, ಹುಣಸೂರು ತಾಲೂಕಿನ 41 ಗ್ರಾಪಂಗಳಲ್ಲಿ 27, ಕೆ.ಆರ್.ನಗರ ತಾಲೂಕಿನ 34 ಗ್ರಾಪಂಗಳಲ್ಲಿ 28, ಮೈಸೂರಿನ 27 ಗ್ರಾಪಂಗಳಲ್ಲಿ 16, ನಂಜನಗೂಡಿನ 45 ಗ್ರಾಪಂಗಳಲ್ಲಿ 25, ಪಿರಿಯಾಪಟ್ಟಣದ 34 ಗ್ರಾಪಂಗಳಲ್ಲಿ 21 ಸರಗೂರಿನ 13 ಗ್ರಾಪಂಗಳಲ್ಲಿ 8, ತಿ.ನರಸೀಪುರದ 36 ಗ್ರಾಪಂಗಳಲ್ಲಿ 32 ಪಂಚಾಯಿತಿಗಳಲ್ಲಿ ಮಹಿಳಾ ಡ್ರೈವರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ವ್ಯಾಪ್ತಿಗೆ ಬರುವ ಸ್ವಚ್ಛ ಭಾರತ ಅಭಿಯಾನ (ಎಸ್‌ಬಿಎಂ)ದಲ್ಲಿ ಪ್ರತಿಯೊಂದು ಗ್ರಾಪಂಗೂ ಘನತ್ಯಾಜ್ಯ ನಿರ್ವಹಣಾ ಘಟಕವನ್ನು ಸ್ಥಾಪನೆ ಮಾಡಲಾಗಿದೆ. ಈ ಘಟಕಕ್ಕೆ ಪಂಚಾಯಿತಿ ವ್ಯಾಪ್ತಿಯ ಊರು ಗಳಿಂದ ಹಸಿ ಕಸ-ಒಣಕಸವನ್ನು ಸಂಗ್ರಹಣೆ ಮಾಡಿಕೊಂಡು ಬರುವುದಕ್ಕೆ ಸಣ್ಣ ಗಾತ್ರದ ಟಿಪ್ಪರ್‌ಗಳನ್ನು ‘ಸ್ವಚ್ಛತಾ ವಾಹಿನಿ’ ಹೆಸರಿನಲ್ಲಿ ನಿಯೋಜನೆ ಮಾಡಲಾಗಿದೆ. ಈ ವಾಹನಗಳನ್ನು ಚಾಲನೆ ಮಾಡಲು ಮೈಸೂರು ಜಿಲ್ಲೆಯಲ್ಲಿ ಮಹಿಳೆಯರು ಮುಂದೆ ಬಂದಿದ್ದಾರೆ.

ಆಯ್ಕೆ ಹೇಗೆ: ಸ್ವಚ್ಛತಾ ವಾಹಿನಿ ಚಾಲನೆ ಮಾಡಲು ಆಯ್ಕೆ ಪ್ರಕ್ರಿಯೆಯೂ ಸ್ಥಳೀಯ ಗ್ರಾಮಪಂಚಾಯಿತಿ ಮಟ್ಟದಲ್ಲೇ ಆಗುತ್ತದೆ. ಸ್ತ್ರೀ ಶಕ್ತಿ ಮಹಿಳಾ ಸ್ವ ಸಹಾಯ ಸಂಘದಲ್ಲಿ ಸದಸ್ಯರಾಗಿರುವವರಲ್ಲೇ ಚಾಲನಾ ವಿಷಯದಲ್ಲಿ ಆಸಕ್ತಿ ಇರುವವರನ್ನು ಗ್ರಾಪಂ ನೈರ್ಮಲ್ಯ ಸಮಿತಿ ಹಾಗೂ ಗ್ರಾಪಂನ ಆಡಳಿತ ಮಂಡಳಿಯು ಗುರುತಿಸಿ, ನಡಾವಳಿ( ಪ್ರೊಸಿಡಿಂಗ್ಸ್) ಯನ್ನು ಮಾಡುತ್ತದೆ. ನಂತರ ಆಯ್ಕೆಯಾದವರನ್ನು ಜಿಪಂನ ಎನ್‌ಆರ್‌ಎಲ್‌ಎಂ ಮೂಲಕ ಹಿನಕಲ್‌ನಲ್ಲಿ ಇರುವ ರುಡ್‌ಸೆಟ್‌ನಲ್ಲಿ ಒಂದು ತಿಂಗಳ ಕಾಲ ತರಬೇತಿಗೆ ಕಳುಹಿಸಲಾಗುತ್ತದೆ. ಅಲ್ಲಿ ಊಟ-ವಸತಿಯೊಂದಿಗೆ ಪ್ರತಿಷ್ಠಿತ ಚಾಲನಾ ತರಬೇತಿ ಸಂಸ್ಥೆಯು ಡ್ರೈವಿಂಗ್ ಕಲಿಸುತ್ತದೆ. ಚಾಲನೆ ಕಲಿತ ನಂತರ ಡ್ರೈವಿಂಗ್ ಲೈಸೆನ್ಸ್ ನೀಡಲಾಗುತ್ತದೆ. ಬಳಿಕ ಅವರು ತಮ್ಮ ಗ್ರಾಪಂಗಳಿಗೆ ಹೋಗಿ ಕಾರ್ಯನಿರ್ವಹಿಸುತ್ತಾರೆ.

ಚಾಲನಾ ತರಬೇತಿಯಲ್ಲಿ ಸಹಜವಾಗಿ ಕಾರು ಸೇರಿದಂತೆ ಬೇರೆ ವಾಹನಗಳನ್ನು ಚಾಲನೆ ಮಾಡುವುದನ್ನು ಕಲಿಸುತ್ತಾರೆ. ಆದರೆ ಮಹಿಳೆಯರಿಗೆ ಅವರು ಚಾಲನೆ ಮಾಡಬೇಕಾಗಿರುವ ‘ಸ್ವಚ್ಛತಾ ವಾಹಿನಿ’ಯಲ್ಲೇ ಕಲಿಯುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಅವರು ಬೇಗನೆ ಚಾಲನೆ ಕಲಿಯುವುದಕ್ಕೂ ಅನುಕೂಲವಾಗುವುದಲ್ಲದೆ. ವಾಹನವನ್ನು ಓಡಿಸುವ ಬಗ್ಗೆ ಸ್ಪಷ್ಟತೆಯೂ ಸಿಗುತ್ತದೆ.

ಜೀವನಕ್ಕೂ ದಾರಿಯಾಗಿದೆ

ಸ್ವಚ್ಛತಾ ವಾಹಿನಿಯನ್ನು ಚಾಲನೆ ಮಾಡುವುದರಿಂದ ನಮ್ಮ ಊರಿನಲ್ಲೇ ದುಡಿಯಬಹುದಾಗಿದೆ. ಮನೆಯ ಮುಂದಿನ ಕೆಲಸವಾದ್ದರಿಂದ ಸಂಸಾರವನ್ನು ನೋಡಿಕೊಳ್ಳಲು ಅನುಕೂಲವಾಗಿದೆ. ಈ ಕೆಲಸದಿಂದ ಬರುವ ಗೌರವಧನದಿಂದ ಜೀವನಕ್ಕೂ ದಾರಿಯಾಗಿದೆ. ಮಕ್ಕಳ ವಿದ್ಯಾಭ್ಯಾಸವನ್ನು ಮಾಡಿಸಲು ಅನುಕೂಲವಾಗುತ್ತಿದೆ ಎಂದು ರಂಗಸಮುದ್ರದ ಚಾಲಕಿ ರೇಖಾ ಅವರು ತಮ್ಮ ಅನುಭವವನ್ನು ಹಂಚಿಕೊಂಡರು.

ಎಸ್‌ಎಸ್‌ಎಲ್‌ಸಿ ಓದಿರುವ ರೇಖಾ ಅವರಿಗೆ ದುಡಿಯುವ ಹುಮ್ಮಸ್ಸು ಇದ್ದರೂ ಹೊರಗಡೆ ಹೋಗಬೇಕಲ್ಲ ಎನ್ನುವ ಆತಂಕವಿತ್ತು. ಆದರೆ ಸ್ವಚ್ಛತಾ ವಾಹಿನಿ ಚಾಲನೆ ಮಾಡುವುದಕ್ಕೆ ಆಯ್ಕೆಯಾದ ಮೇಲೆ ಊರಿನ ವಾತಾವರಣದಲ್ಲೇ ಕೆಲಸ ಮಾಡುತ್ತಿರುವುದರಿಂದ ಯಾವುದೇ ಭಯ-ಆತಂಕವು ಇಲ್ಲ. ಮೊದಮೊದಲು ಜನರು ಇವರು ವಾಹನ ಚಾಲನೆ ಮಾಡುವುದನ್ನು ಒಂದು ರೀತಿ ವಿಚಿತ್ರವಾಗಿ ನೋಡುತ್ತಿದ್ದರು. ಆದರೆ ಈಗ ಎಲ್ಲರೂ ಒಗ್ಗಿಕೊಂಡಿದ್ದು, ಎಷ್ಟೊತ್ತಿಗೆ ನಮ್ಮ ಮನೆಯ ಬಳಿಗೆ ಬರುತ್ತೀರಾ ಎಂದು ಫೋನ್ ಮಾಡಿ ಕೇಳುತ್ತಿದ್ದಾರೆ. ಅಷ್ಟರ ಮಟ್ಟಿಗೆ ಬಾಂಧವ್ಯ ವೃದ್ಧಿಯಾಗಿದೆ ಎನ್ನುತ್ತಾರೆ ಅವರು.

ಅರಿವು ಮೂಡಿಸುವ ಕೆಲಸ ನಾಗನಹಳ್ಳಿಯ ಶೋಭಾ ಅವರು ಸ್ವಚ್ಛತಾ ವಾಹಿನಿ ಚಾಲನೆ ಮಾಡುವುದಲ್ಲದೇ ತ್ಯಾಜ್ಯ ನಿರ್ವಹಣೆ ಕುರಿತು ಜನರಿಗೆ ಅರಿವು ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ದ್ವಿತೀಯ ಪಿಯುಸಿ ಓದಿರುವ ಶೋಭಾ ಅವರು, ಪ್ಲಾಸ್ಟಿಕ್ ಬಳಕೆಯಿಂದ ಆಗುತ್ತಿರುವ ಪರಿಣಾಮಗಳ ಕುರಿತ ಕಾರ್ಯಾಗಾರಗಳಲ್ಲಿ ಭಾಗವಹಿಸಿ ಮಾಹಿತಿಯನ್ನು ಪಡೆದುಕೊಂಡಿರುವುದು ಅವರಿಗೆ ಈಗ ಉಪಯೋಗಕ್ಕೆ ಬರುತ್ತಿದೆ. ‘ನಮ್ಮ ಕೈಯಿಂದ ಏನೂ ಆಗುವುದಿಲ್ಲ ಎಂದು ಯಾರೂ ಕೈ ಕಟ್ಟಿ ಕುಳಿತುಕೊಳ್ಳಬಾರದು.ಈಗ ನಾನು ಡ್ರೈವಿಂಗ್ ಕಲಿತ ಮೇಲೆ ಜೀವನ ಸಾಗಿಸಲು ಯಾವ ಭಯವೂ ಇಲ್ಲ. ಗೌರವಯುತವಾಗಿ ಬದುಕು ಕಟ್ಟಿಕೊಳ್ಳಲು ದಾರಿ ಇದ್ದೇ ಇದೆ ಎನ್ನುವ ಅರಿವು ಬಂದಿದೆ. ಈ ಕೆಲಸದಿಂದ ನಮ್ಮ ಸಂಸಾರವನ್ನು ಸುಗಮವಾಗಿ ಸಾಗಿಸಿಕೊಂಡು ಹೋಗುತ್ತಿದ್ದೇನೆ’ ಎಂದು ಶೋಭಾ ಅವರು ಹೆಮ್ಮೆಯಿಂದಲೇ ಹೇಳಿಕೊಂಡರು.

ಮಹಿಳಾ ಸಬಲೀಕರಣದ ಉದ್ದೇಶದಿಂದ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಕಡ್ಡಾಯವಾಗಿ ಕೆಲಸಕೊಡಬೇಕು ಎನ್ನುವ ಉದ್ದೇಶವನ್ನು ಮೈಸೂರು ಜಿಲ್ಲಾ ಪಂಚಾಯಿತಿ ಹೊಂದಿದೆ. ಈ ಹಿನ್ನೆಲೆಯಲ್ಲಿ ಸ್ವಚ್ಛತಾ ವಾಹಿನಿ ಚಾಲನೆ ಮಾಡುವ ಕೆಲಸವನ್ನು ಮಹಿಳೆಯರಿಗೆ ನೀಡುತ್ತಿದ್ದೇವೆ. ಈಗಾಗಲೇ 180 ಗ್ರಾಪಂಗಳಲ್ಲಿ ಆಯ್ಕೆಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ 76 ಗ್ರಾಪಂಗಳಲ್ಲಿ ಆಯ್ಕೆಯ ಪ್ರಕ್ರಿಯೆ ನಡೆಯುತ್ತಿದೆ. - ಡಾ.ಎಂ. ಕೃಷ್ಣರಾಜು ಉಪ ಕಾರ್ಯದರ್ಶಿ (ಅಭಿವೃದ್ಧಿ)ಮೈಸೂರು ಜಿಲ್ಲಾ ಪಂಚಾಯಿತಿ