ನ್ಯೂಸ್

ಸ್ಮಾರ್ಟ್‌ಸಿಟಿ ಕಾಮಗಾರಿಗಳ ಬಗ್ಗೆ ಸಿದ್ದೇಶ್ವರ ಅಸಮಾಧಾನ

ದಾವಣಗೆರೆ : ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಕಾಮಗಾರಿಗಳ ಗುಣಮಟ್ಟ ಮತ್ತು ಪ್ರಗತಿಯ ಬಗ್ಗೆ ಸಂಸದ ಜಿ.ಎಂ. ಸಿದ್ದೇಶ್ವರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಕಾಮಗಾರಿ ಕೈಗೊಂಡಿರುವ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡುತ್ತೇವೆ. ಕೆಲಸ ತೃಪ್ತಿಕರವಾಗಿದ್ದರೆ ಮಾತ್ರ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಲಾಗುವುದು ಎಂದು ತಿಳಿಸಿದರು. ರಸ್ತೆ ಕಾಮಗಾರಿಗಳ ವಿಳಂಬದ ಬಗ್ಗೆ ಸಿದ್ದೇಶ್ವರ ಅತೃಪ್ತಿ ವ್ಯಕ್ತಪಡಿಸಿದರು. ಕಾಲಮಿತಿಯನ್ನು 4 ಬಾರಿ ವಿಸ್ತರಿಸಿದ್ದರೂ ರಸ್ತೆಗಳನ್ನು ಏಕೆ ಪೂರ್ಣಗೊಳಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ರಸ್ತೆಬದಿಯ ಅಂಗಡಿಗಳ ಮುಂದೆ ಮೆಟ್ಟಿಲುಗಳನ್ನು ಮಾಡಿಲ್ಲ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಸ್ಮಾರ್ಟ್ ಎಂದರೆ ಇದೇನಾ ಎಂದು ಪ್ರಶ್ನಿಸಿದರು. ರಸ್ತೆ ನಿರ್ಮಿಸಲು ಯಾವುದೇ ನೆಪಗಳನ್ನು ಹೇಳಬೇಡಿ, ಈಗಾಗಲೇ 2 ವರ್ಷ ಕಳೆದಿವೆ, ಇನ್ನೂ ಯಾವಾಗ ಮುಗಿಸುತ್ತೀರಿ ಎಂದು ಸಿದ್ದೇಶ್ವರ ಹರಿಹಾಯ್ದರು. ಫುಟ್‌ಪಾತ್ ತೆರವುಗೊಳಿಸಲು ಪೊಲೀಸರ ನೆರವು ಪಡೆಯಿರಿ ಎಂದು ಮೇಯರ್ ಬಿ.ಜಿ. ಅಜಯ್ ಕುಮಾರ್ ಸೂಚಿಸಿದರು. ಚೌಕಿಪೇಟೆಯ ರಸ್ತೆ ಸ್ಮಾರ್ಟ್ ಸಿಟಿ ಹೆಸರಿಗೆ ಕಳಂಕವಿದ್ದಂತೆ ಎಂದು ಕಾಂಗ್ರೆಸ್ ಸದಸ್ಯ ಚಮನ್‌ಸಾಬ್ ಹೇಳಿದರು. ಲೋಪ ಎಸಗಿದ ಗುತ್ತಿಗೆದಾರರಿಗೆ ನೋಟಿಸ್ ಕೊಡಿ ಎಂದು ಸಂಸದರು ಸೂಚಿಸಿದರು. ಎರಡು ವರ್ಷಗಳಾದರೂ ಕಾಮಗಾರಿ ಮುಗಿದಿಲ್ಲವೆಂದರೆ ನಾಚಿಕೆಯಾಗುತ್ತದೆ. ಕೆಲವು ಕಡೆ ಸ್ಲಾೃಬ್‌ಗಳು ಒಡೆದಿವೆ. ಕಳಪೆ ಕಾಮಗಾರಿಗಳಾಗಿವೆ. ಎಲ್ಲವನ್ನೂ ತಪಾಸಣೆ ಮಾಡಿದರೆ ಅವ್ಯವಹಾರಗಳು ಬಯಲಿಗೆ ಬರುತ್ತವೆ ಎಂದರು. ಎಸ್‌ಪಿಎಸ್ ನಗರದಲ್ಲಿ ಚರಂಡಿ ನೀರು ಮನೆಗಳಿಗೆ ನುಗ್ಗುತ್ತಿದೆ ಎಂದು ಹೇಳಿದರು.