ಶಿವಮೊಗ್ಗ: ಸಾರ್ವಜನಿಕರ ತೆರಿಗೆ ಹಣದಿಂದ ಮಾಡಿದ ಯೋಜನೆಗಳು ಸದ್ಬಳಕೆ ಆಗಬೇಕು. ಆಗ ಮಾತ್ರ ಕಾಮಗಾರಿಗಳಿಗೂ ಮೌಲ್ಯ ಬರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗ ಸ್ಮಾರ್ಟ್‌ಸಿಟಿ ಲಿಮಿಟೆಡ್‌ನಿಂದ ಸೋಮವಾರ ಇಮಾಮ್ ಬಾಡಾದಲ್ಲಿ ತುಂಗಾ ರಿವರ್‌ಫ್ರಂಟ್ ಯೋಜನೆಯಡಿ ಸಾರ್ವಜನಿಕರ ಬೈಸಿಕಲ್ ಸಂಚಾರಕ್ಕೆ ಮುಕ್ತಗೊಳಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನಗೊಂಡಿದೆ ಎಂದರು.
ತುಂಗಾ ನದಿ ಉತ್ತರದಂಡೆ ಪಾದಚಾರಿ ಸೇತುವೆ, ವಾಯುವಿಹಾರ, ಸಾರ್ವಜನಿಕ ಬೈಸಿಕಲ್ ಯೋಜನೆ ಮುಂತಾದವುಗಳನ್ನು ಸಾರ್ವಜನಿಕರು ಜವಾಬ್ದಾರಿಯಿಂದ ಬಳಸಿಕೊಳ್ಳಬೇಕಿದೆ. ಜನರು ಕಟ್ಟುವ ಕಂದಾಯದ ಹಣದಿಂದಲೇ ನಿರ್ಮಾಣವಾಗಿರುವ ಸ್ಮಾರ್ಟ್‌ಸಿಟಿ ಯೋಜನೆಗಳ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಯೋಜನೆಯ ಉಪಯೋಗವನ್ನು ಎಲ್ಲರೂ ಪಡೆಯಬೇಕು. ಸಾರ್ವಜನಿಕರು ತುಂಗಾ ನದಿ ಉದ್ಯಾನದಲ್ಲಿ ಓಡಾಡುವಂತಾಗಬೇಕು ಎಂದರು.
ತುಂಗಾ ರಿವರ್ ಫ್ರಂಟ್ ಪ್ರಾಜೆಕ್ಟ್ ಅನ್ನು 103 ಕೋಟಿ ರೂ. ವೆಚ್ಚದಲ್ಲಿ ಮಾಡಲಾಗಿದೆ. ಸಾರ್ವಜನಿಕರು ಸ್ವಚ್ಛತೆ ಹಾಗೂ ಕಾಳಜಿಯಿಂದ ನೋಡಿಕೊಳ್ಳಬೇಕು. ಉದ್ಯಾನದಲ್ಲಿ ಮಹಿಳೆಯರು, ಮಕ್ಕಳಿಗೆ ತೊಂದರೆ ಆಗದಂತೆ ರಕ್ಷಣಾ ವ್ಯವಸ್ಥೆ, ಸಿಸಿಟಿವಿ ಅವಳವಡಿಸುವುದು, ರಾತ್ರಿ ವೇಳೆ ವಿದ್ಯುದ್ದೀಪ ಸೇರಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಸ್ಮಾರ್ಟ್‌ಸಿಟಿ ಕಾಮಗಾರಿಗಳು ಉತ್ತಮವಾಗಿ ಆಗಿದ್ದು ಇಂದು ಸಾರ್ವಜನಿಕರಿಗೆ ಮುಕ್ತಗೊಳಿಸುವ ಕಾರ್ಯ ನಡೆದಿದೆ. ಈ ಸ್ಪಾರ್ಟ್‌ಸಿಟಿ ಯೋಜನೆ ಮಂಜೂರಾತಿ ಮತ್ತು ಅನುಷ್ಠಾನದಲ್ಲಿ ಅನೇಕ ನಾಯಕರ ಪ್ರಯತ್ನ ಮತ್ತು ಶ್ರಮವಿದೆ. ನಗರದ 6 ವಾರ್ಡ್‌ಗಳಲ್ಲಿ ಪೂರ್ಣ ಪ್ರಮಾಣ ಮತ್ತು 9 ವಾರ್ಡ್‌ಗಳಲ್ಲಿ ಭಾಗಶಃ ಸ್ಮಾರ್ಟ್‌ಸಿಟಿ ಕೆಲಸಗಳು ಆಗಿವೆ. ಮುಂದಿನ ಹಂತದಲ್ಲಿ ಇತರ ವಾರ್ಡ್‌ಗಳನ್ನು ಪರಿಗಣಿಸಲಾಗುವುದು ಎಂದರು.
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಎಚ್.ಸಿ.ಯೋಗೇಶ್, ಗನ್ನಿ ಶಂಕರ್, ಧೀರರಾಜ್ ಹೊನ್ನವಿಲೆ, ಶಬನಾ ಖಾನಂ, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಮಾಯಾಣ್ಣ ಗೌಡ, ಮುಖ್ಯಇಂಜನಿಯರ್ ರಂಗನಾಥ ನಾಯ್ಕ, ಇಂಜಿನಿಯರ್ ಲಕ್ಷ್ಮೀ, ಸಿಬ್ಬಂದಿ ಇದ್ದರು.