ನ್ಯೂಸ್

ಸ್ಮಶಾನದಲ್ಲಿ ಮರಣ ನೋಂದಣಿ ಡಿಜಿಟಲೀಕರಣ ಮಾಡಿ

ಜನನ-ಮರಣ ಪ್ರಮಾಣ ಪತ್ರದ ಶುಲ್ಕ ಕಡಿತ ಮಾಡುವ ಜತೆಗೆ ಸ್ಮಶಾನದಲ್ಲಿ ಮರಣ ನೋಂದಣಿಯನ್ನು ಡಿಜಿಟಲೀಕರಣ ಮಾಡುವ ವ್ಯವಸ್ಥೆ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ವತಿಯಿಂದ ಬುಧವಾರ ನಗರ ಪಾಲಿಕೆ ಹೆಚ್ಚುವರಿ ಆಯುಕ್ತೆ ಎಸ್.ಕುಸುಮಾ ಕುಮಾರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಜನನ- ಮರಣ ಪ್ರಮಾಣ ಪತ್ರ ಪಡೆಯುವುದಕ್ಕೆ ಸಾರ್ವಜನಿಕರು ದುಬಾರಿ ಶುಲ್ಕ ಪಾವತಿ ಮಾಡಿ ಪ್ರತಿದಿನ ಪಾಲಿಕೆ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಇದರ ಶುಲ್ಕವನ್ನು 5 ರೂಪಾಯಿಂದ 50 ರೂಪಾಯಿಗೆ ಏಕಾಏಕಿ ಹೆಚ್ಚಿಸಿದ್ದು ಸಾರ್ವಜನಿಕರಿಗೆ ತೊಂದರೆಯಾಗಿದೆ. ಹಾಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ದರವನ್ನು ಎಂದಿನಂತೆ ಮಾರ್ಪಾಡು ಮಾಡಬೇಕು ಎಂದು ಒತ್ತಾಯಿಸಿದರು.

ನಗರದಲ್ಲಿನ ಸ್ಮಶಾನಗಳನ್ನು ಅಭಿವೃದ್ಧಿಪಡಿಸಬೇಕು. ಸಮರ್ಪಕ ಮೂಲ ಸೌಕರ್ಯ ವ್ಯವಸ್ಥೆ ಕಲ್ಪಿಸುವುದು ನಗರಪಾಲಿಕೆಯ ಆದ್ಯ ಕರ್ತವ್ಯ ಆಗಿದೆ. ಸ್ಥಳೀಯ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿದರೂ ಪುಸ್ತಕದಲ್ಲಿ ನೋಂದಣಿ ಮಾಡಲು ಎರಡು, ಮೂರು ದಿನಗಳು ಕಾಯಬೇಕಾದ ಪರಿಸ್ಥಿತಿಯಿದೆ. ಅಲ್ಲದೆ ಆ ಪುಸ್ತಕ ನಗರಪಾಲಿಕೆಗೆ ತಲುಪಲು ತಡವಾಗುತ್ತಿದೆ. ಅಲ್ಲಿ ಹೆಸರನ್ನು ಸರಿಯಾಗಿ ನಮೂದಿಸಿದ್ದರೂ ಅದನ್ನು ಕಂಪ್ಯೂಟರ್‌ನಲ್ಲಿ ತಪ್ಪಾಗಿ ನಮೂದಿಸುತ್ತಿದ್ದಾರೆ. ಅದನ್ನು ಕೋರ್ಟ್‌ನಲ್ಲಿ ಸರಿಪಡಿಸಬೇಕಾದ ಪರಿಸ್ಥಿತಿಯಿದೆ. ಆದ್ದರಿಂದ ಸದರಿ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು ಎಂದು ಒತ್ತಾಯಿಸಿದರು.

ಮೈಸೂರು ಘಟಕದ ಕಾರ್ಯದರ್ಶಿ ವಿಕ್ರಮ್ ಅಯ್ಯಂಗಾರ್, ಬಿಜೆಪಿ ನಗರ ಉಪಾಧ್ಯಕ್ಷ ಜೋಗಿ ಮಂಜು, ಅಜಯ್ ಶಾಸ್ತ್ರಿ, ಮಹಾನ್ ಶ್ರೇಯಸ್ ಇದ್ದರು.