ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ರಮವಾಗಿ ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಇದೀಗ ಕಾಂಗ್ರೆಸ್ ಮುಖಂಡರು ಮತ್ತೊಂದು ದೂರು ದಾಖಲಿಸಿದ್ದಾರೆ.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಶನಿವಾರ ನಗರದ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಸ್ನೇಹಮಯಿ ಕೃಷ್ಣ ವಿರುದ್ಧ ದೂರು ನೀಡಿದ್ದಾರೆ. ‘ರೌಡಿಶೀಟರ್ ಆಗಿರುವ ಸ್ನೇಹಮಯಿ ಕೃಷ್ಣ ಅವರನ್ನು ಗಡಿಪಾರು ಮಾಡಲು ಮತ್ತು ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಬಂಧಿಸುವಂತೆ’ ದೂರು ನೀಡಿದ್ದಾರೆ.
ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಸ್ನೇಹಮಹಿ ಕೃಷ್ಣ ರೌಡಿಶೀಟರ್. ಆತನ ಮೇಲೆ ನಾನಾ ಕೇಸ್‌ಗಳಿವೆ. ಆತನ ಮೇಲೆ ಮೂರುವರೆ ವರ್ಷಗಳಿಂದ ಯಾವುದೇ ಸೆಕ್ಯೂರಿಟಿ ಕೇಸ್ ಹಾಕಿಲ್ಲ. ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ದಾಖಲೆ ಬಿಡುಗಡೆ ಮಾಡುತ್ತಾ ಇದ್ದಾನೆ. ಸಾರ್ವಜನಿಕ ವಲಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಕೆಟ್ಟ ಅಭಿಪ್ರಾಯ ಮೂಡಿಸುತ್ತಿದ್ದಾನೆ. ಈತನನ್ನು ಕೂಡಲೇ ಅರೆಸ್ಟ್ ಮಾಡಬೇಕು. ರೌಡಿಶೀಟರ್ ಆಗಿರುವ ಈತ ಸಿಎಂ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿ ಸುಳ್ಳು ದಾಖಲೆ ನೀಡಿದ್ದಾನೆ. ಆತ ಬಿಡುಗಡೆ ಮಾಡಿರುವ ಚಲನ್ ಹಣ ಕಟ್ಟಿರುವ ದಾಖಲೆ ಎಲ್ಲ ಸುಳ್ಳು. ಆತ ಬಿಡುಗಡೆ ಮಾಡಿರುವ ದಾಖಲೆ ಸುಳ್ಳು ಅಂತಾ ಮುಡಾ ಅಧಿಕಾರಿಗಳೇ ಹೇಳುತ್ತಿದ್ದಾರೆ. ಸ್ನೇಹಮಯಿ ಕೃಷ್ಣನನ್ನ ಕೂಡಲೇ ಬಂಧಿಸಬೇಕು. ಅರೆಸ್ಟ್ ಮಾಡದಿದ್ದರೆ ನಾಳೆಯಿಂದ ಪೋಲಿಸ್ ಠಾಣೆ ಮುಂದೆ ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದರು.