ಬಾಳೆಹೊನ್ನೂರು: ಸ್ನೇಹಕ್ಕಿಂತ ಮಿಗಿಲಾದ ಸಂಬಂಧ ಬೇರೊಂದಿಲ್ಲ ಎಂದು ಮೇಲ್ಪಾಲ್ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಕೆ.ಎಂ.ರಾಘವೇಂದ್ರ ಹೇಳಿದರು.
ಪಟ್ಟಣದ ಜೆಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯಿಂದ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಉತ್ತಮ ಸ್ನೇಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ನೇಹವೆಂಬುದು ಸಮಾಜದಲ್ಲಿ ವಿಶೇಷ ಸಂಬಂಧವಾಗಿದ್ದು, ಸ್ನೇಹಿತರಿಲ್ಲದೆ ಜೀವನದಲ್ಲಿ ಬದುಕಲು ಸಾಧ್ಯವೇ ಇಲ್ಲ ಎಂದರು.
ಕುಟುಂಬದಲ್ಲಿ ಹೇಳಿಕೊಳ್ಳಲಾಗದ ಕಷ್ಟ, ಸುಖಗಳನ್ನು ಸ್ನೇಹಿತರ ಬಳಿ ಹೇಳಿ ನೆಮ್ಮದಿ ಕಂಡುಕೊಳ್ಳುತ್ತಾನೆ. ಸ್ನೇಹ ಎಂಬುದು ಇಂದಿನ ಸಂಬಂಧವಲ್ಲ. ಪೌರಾಣಿಕ ಕಾಲದಲ್ಲೂ ದೇವಾನುದೇವತೆಗಳು ಹಲವರ ಸ್ನೇಹವನ್ನು ಹೊಂದಿರುವ ಉಲ್ಲೇಖಗಳು ಇವೆ ಎಂದರು.
ಜೆಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ ಮಾತನಾಡಿ, ಜೇಸಿ ಸಂಸ್ಥೆ ಈ ವರ್ಷ ವಿಭಿನ್ನ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಗಮನಸೆಳೆದಿದ್ದು ಅಂತಾರಾಷ್ಟ್ರೀಯ ದಿನಗಳನ್ನು ವಿಶೇಷವಾಗಿ ಆಚರಿಸುತ್ತಿದೆ ಎಂದರು. ಪತ್ರಕರ್ತ ಬಿ.ಎಸ್.ನಾಗರಾಜ ಭಟ್ ಅವರಿಗೆ ಉತ್ತಮ ಸ್ನೇಹಜೀವಿ ಪುರಸ್ಕಾರ ನೀಡಲಾಯಿತು. ಜೇಸಿ ನಿಕಟಪೂರ್ವ ಅಧ್ಯಕ್ಷ ಎನ್.ಶಶಿಧರ್, ಕಾರ್ಯದರ್ಶಿ ವಿ.ಅಶೋಕ್, ಪ್ರಮುಖರಾದ ಚೈತನ್ಯ ವೆಂಕಿ, ಎಚ್.ಗೋಪಾಲ್, ಸತೀಶ್ ಅರಳೀಕೊಪ್ಪ, ಬಿ.ಎಸ್.ಅಜಿತ್, ಯಶವಂತ್, ಹಿರಿಯ ಕ್ರೀಡಾಪಟು ಒ.ಡಿ.ಸ್ಟೀನ್, ಸದಸ್ಯರಾದ ಕೆ.ಪ್ರಶಾಂತ್‌ಕುಮಾರ್, ರೋಹಿತ್, ರಾಮ್ ಪ್ರಸಾದ್, ಶಾಹಿದ್, ಸಿ.ವಿ.ಸುನೀಲ್ ಮತ್ತಿತರರಿದ್ದರು.