ಬೇಲೂರು : ಸರ್ಕಾರದಿಂದ ವಿವಿಧ ಇಲಾಖೆಗಳಿಗೆ ಬರುವ ಸವಲತ್ತು ಹಾಗೂ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ನೇರವಾಗಿ ವಿತರಿಸಬೇಕು. ಒಂದೇ ಕುಟುಂಬದವರಿಗೆ ಕೊಡದೆ ಹಂತ ಹಂತವಾಗಿ ಎಲ್ಲರಿಗೂ ತಲುಪುವಂತಾಗಬೇಕು. ಮಧ್ಯವರ್ತಿಗಳ ಮೂಲಕ ವಿತರಿಸಿದ್ದು ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಹಾಗೂ ತಾಪಂ ಆಡಳಿತಾಧಿಕಾರಿ ಡಾ.ಕೆ.ಆರ್.ರಮೇಶ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಫಲಾನುಭವಿಗಳಗೆ ಸೌಲಭ್ಯಗಳ ವಿತರಣೆಯಲ್ಲಿ ಏಜೆಂಟರ ಪಾತ್ರದ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಈ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಿ ಅರ್ಹರನ್ನು ಗುರುತಿಸಿ ಸೌಲಭ್ಯ ಕೊಡುವ ಕೆಲಸ ಮಾಡಬೇಕು. ಜತೆಗೆ ಕೊಟ್ಟವರಿಗೆ ಮತ್ತೆ ಮತ್ತೆ ಕೊಡಬಾರದು ಎಂದರು.
ತಾಲೂಕು ಪಂಚಾಯಿತಿಗೆ ಸೇರಿದ ನಿವೇಶನ ಮತ್ತು ಕಟ್ಟಡಗಳು ಎಲ್ಲೆಲ್ಲ್ಲಿವೆ. ಮತ್ತು ಯಾವ ಸ್ಥಿತಿಯಲ್ಲಿವೆ ಎಂಬುದರ ಸಂಪೂರ್ಣ ಮಾಹಿತಿ ನೀಡಬೇಕು. ಜತೆಗೆ ಸರ್ವೇ ಮಾಡಿಸಿ ಯಾರೂ ಒತ್ತುವರಿ ಮಾಡದಂತೆ ತಾಪಂಗೆ ಸೇರಿದ ಜಾಗ ಎಂದು ಗುರುತು ಮಾಡಿ ತಮ್ಮ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದರು.
ತಾಪಂ ಇಒ ವಸಂತ ಕುಮಾರ್ ಮಾತನಾಡಿ, ಸರ್ಕಾರಿ ನೌಕರರ ಭವನದ ಪಕ್ಕದಲ್ಲಿ ಫೌಂಡೇಷನ್ ಹಾಕಿರುವ ಜಾಗದಲ್ಲಿ ಕೆಲವರು ತಳ್ಳು ಗಾಡಿಗಳನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ಯಾರೋ ಒಬ್ಬರು ತಗಡಿನ ಶೀಟಿನಿಂದ ಮಾಡಿರುವ ಪೆಟ್ಟಿಗೆ ತಂದಿಟ್ಟಾರೆ. ಅದನ್ನು ಶೀಘ್ರವೇ ತೆರವುಗೊಳಿಸಲಾಗುವುದು. ಈ ಹಿಂದೆ ಅನುದಾನದ ಕೊರತೆಯಿಂದ ಕಾಮಗಾರಿ ಕುಂಠಿತವಾಗಿತ್ತು. ಆದರೆ ಈಗ ಅದಕ್ಕೆ ಅನುದಾನ ತಂದ ನಂತರ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಿಸಲಾಗುವುದು ಎಂದರು.
ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಸರ್ಕಾರಿ ನೌಕರರ ಭವನದ ಪಕ್ಕದಲ್ಲಿರುವ ತಳ್ಳುಗಾಡಿ ಮತ್ತು ಮಳಿಗೆಗಳನ್ನು ತೆರವು ಮಾಡಿದರೆ ಎಲ್ಲವನ್ನೂ ತೆಗೆಸಿ. ಇಲ್ಲವೇ ಅನುದಾನ ಬಂದ ನಂತರ ಕಾಮಗಾರಿ ಪ್ರಾರಂಭಿಸುವಾಗ ತೆಗೆಸಿರಿ. ಈ ವಿಚಾರವನ್ನು ಮುಂದಿನ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳೋಣ ಎಂದರು.
ಕುಡಿಯುವ ನೀರು ಸರಬರಾಜು ಮಾಡುವುದಕ್ಕಾಗಿ ತಾಲೂಕಿನಲ್ಲಿ ಈಗಾಗಲೇ ಕಾಮಗಾರಿಗಳು ಪ್ರಗತಿಯಲ್ಲಿವೆ. ಆದರೆ ಗುತ್ತಿಗೆದಾರರು ಸರಿಯಾದ ರೀತಿಯಲ್ಲಿ ನೀರು ಹಾಕಿ ಕ್ಯೂರಿಂಗ್ ಮಾಡುತ್ತಿಲ್ಲ ಎಂಬ ಆರೋಪವಿದೆ. ಆದ್ದರಿಂದ ಸರಿಯಾಗಿ ನೀರು ಹಾಕಿ ಕ್ಯೂರಿಂಗ್ ಮಾಡಿದರೆ ಸಾರ್ವಜನಿಕರಿಗೆ ಇದರಿಂದ ಅನುಕೂಲವಾಗುತ್ತದೆ. ತಾಲೂಕಿನ ಚೀಕನಹಳ್ಳಿಯಲ್ಲಿರುವ ಪಶು ಆಸ್ಪತ್ರೆಗೆ ವೈದ್ಯರು ಸರಿಯಾಗಿ ಬರುತ್ತಿಲ್ಲ ಎಂಬ ಆರೋಪವಿದೆ. ಅಧಿಕಾರಿಗಳು ಹೋದಾಗ ವೈದ್ಯರು ಇರುವುದಕ್ಕಿಂತ ಪಬ್ಲಿಕ್ ಹೋದಾಗ ಇರಬೇಕಲ್ಲವೇ. ಚೀಕನಹಳ್ಳಿ ಸೇರಿದಂತೆ ಆ ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಬೀದಿ ನಾಯಿಗಳ ಉಪಟಳ ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಪತ್ರ ಬರೆದು ತಿಳಿಸಬೇಕು. ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿಯೇ ಬೇಲೂರು ತಾಲೂಕಿಗೆ ಉತ್ತಮ ಫಲಿತಾಂಶ ಬರುವಂತೆ ಮಾಡಲು ಅಧಿಕಾರಿಗಳು ಮತ್ತು ಶಿಕ್ಷಕರು ಶ್ರಮ ವಹಿಸಬೇಕು ಎಂದರು.
ಬೇಸಿಗೆ ಪ್ರಾರಂಭವಾಗುತ್ತಿದ್ದು ಮುಂದಿನ ದಿನಗಳಲ್ಲಿ ವಿದ್ಯುತ್ ಅವಶ್ಯಕತೆ ಹೆಚ್ಚಾಗಿ ಬರಬಹುದು. ಆದ್ದರಿಂದ ರೈತರಿಗೆ, ಸಾರ್ವಜನಿಕರಿಗೆ ವಿದ್ಯುತ್ ಅಭಾವವಾಗದಂತೆ ಸೆಸ್ಕ್ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು. ತಾಲೂಕಿನಲ್ಲಿ ವಿದ್ಯುತ್‌ಗೆ ಸಂಬಂಧಿಸಿದ ಗೊಂದಲಗಳಿದ್ದರೆ ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಸರಿಯಾಗಿ ಯಾರೂ ಕೆಲಸ ಮಾಡುವುದಿಲ್ಲವೋ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ. ವಿದ್ಯುತ್ ಅದಾಲತ್ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡದರೆ ಬರುವುದಕ್ಕೆ ಅನುಕೂಲವಾಗುತ್ತದೆ. ಅಲ್ಲದೆ ನಾನು ಯಾವ ಸಂದರ್ಭ, ಯಾವಾಗ ಯಾವ ಇಲಾಖೆಗೆ ಎಷ್ಟೊತ್ತಿಗೆ ಬರುತ್ತೇನೆ ಎಂದು ಗೊತ್ತಿಲ್ಲ. ಅಲ್ಲಿಗೆ ಬಂದಾಗ ಎಲ್ಲ ದಾಖಲೆಗಳು ಮತ್ತು ಸಿಬ್ಬಂದಿ ಇರಬೇಕು. ಇಲ್ಲದಿದ್ದಲ್ಲಿ ಅಂತವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಾತಿನ ಚಕಮಕಿ : ಬಾಕ್ಸ್‌ನ್ಯೂಸ್: ಸರ್ಕಾರದ ಆಸ್ತಿ ರಕ್ಷಿಸಬೇಕಾದ ಕೆಎಸ್‌ಆರ್‌ಟಿಸಿ ಬಸ್ ಡಿಪೋ ವ್ಯವಸ್ಥಾಪಕರು ತಮ್ಮ ಇಲಾಖೆಯಲ್ಲಿ ಕಳ್ಳತನವಾದರೂ ಅದರ ಬಗ್ಗೆ ಚಕಾರವೆತ್ತದಿರುವುದು ನೋಡಿದರೆ ಅದರಲ್ಲಿ ಅವರೂ ಭಾಗಿಯಾಗಿದ್ದಾರೆ ಎಂಬ ಅನುಮಾನ ಮೂಡುತ್ತದೆ. ಬಸ್ ನಿಲ್ದಾಣದಲ್ಲಿದ್ದ ಬೋರ್ಡ್ ಕಳ್ಳತನವಾಗಿರುವ ಬಗ್ಗೆ ಸಿಸಿ ಟಿವಿಯಲ್ಲಿ ದಾಖಲಾಗಿದ್ದರೂ ನೋಡಿ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಏರು ದನಿಯಲ್ಲಿ ಎಚ್ಚರಿಸುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ಕೆಎಸ್‌ಆರ್‌ಟಿಸಿ ಬಸ್ ಡಿಪೋ ವ್ಯವಸ್ಥಾಪಕಿ ಸಾಜಿಯಾ ಬಾನು, ಬೇಲೂರಿನ ಬಸ್ ನಿಲ್ದಾಣದಲ್ಲಿದ್ದ ಭೋರ್ಡ್‌ನ್ನು ಕಟ್ ಮಾಡಿಸಿ ನಮ್ಮ ಡಿಪೋಗೆ ತೆಗೆದುಕೊಂಡು ಹೋಗಿ ಇಟ್ಟಿದ್ದೇವೆ. ಆದರೆ ನಿಮಗೆ ದೂರು ಕೊಟ್ಟವರೆ ಡಿಪೋಗೆ ಕೇಕ್ ತಂದು ಎಲ್ಲರಿಗೂ ಕೊಟ್ಟು ಈ ರೀತಿ ಬೇಕಂತಲೇ ಆರೋಪ ಮಾಡುತಿದ್ದಾರೆ ಎನ್ನುತಿದ್ದಂತೆ ಶಾಸಕರು ಮಾತು ನಿಲ್ಲಿಸುವಂತೆ ತಿಳಿಸಿದರು. ಆದರೆ ಅವರ ಮಾತನ್ನು ಕೇಳದ ಡಿಪೋ ವ್ಯವಸ್ಥಾಪಕಿ ಸಾಜಿಯಾ ಬಾನು, ನನಗೂ ಮಾತನಾಡಲು ಅವಕಾಶ ಕೊಡಿ. ಏನು ನಡೆದಿದೆ ಹೇಳುತ್ತೇನೆ ಎಂದು ಮಾತು ಮುಂದುವರಿಸಿದರು. ಇದರಿಂದ ಇಬ್ಬರ ನಡುವೆಯೂ ಮಾತಿನ ಸಮರಕ್ಕೆ ಕಾರಣವಾಯಿತು.
ಈ ಸಂದರ್ಭ ಸಾಸಕ ಎಚ್.ಕೆ.ಸುರೆಶ್, ಸಿಬ್ಬಂದಿಗೆ ಅವರಿಂದ ಮೈಕ್ ಕಿತ್ತುಕೊಳ್ಳುವಂತೆ ಸೂಚಿಸಿದ್ದರಿಂದ ಸಿಬ್ಬಂದಿ ಮೈಕ್ ವಾಪಸ್ ಪಡೆದ ಘಟನೆ ನಡೆಯಿತು. ಇದರಿಂದ ಸಭೆಯಲ್ಲಿ ಕೆಲ ಸಮಯ ಗೊಂದಲ ಮೂಡಿತು. ನಂತರ ಶಾಸಕರು ಈ ವಿಚಾರವಾಗಿ ಈ ಬಗ್ಗೆ ಸಾರಿಗೆ ಸಚಿವರಿಗೆ ದಾಖಲೆ ಸಮೇತ ಪತ್ರ ಬರೆದು ದೂರು ನೀಡಿ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಎಚ್ಚರಿಸಿದರು.