???????????????????????????????????? 
ನ್ಯೂಸ್

ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಿ

ನಂಜನಗೂಡು: ಕ್ರೀಡೆಯಲ್ಲಿ ಸೋಲು ಮತ್ತು ಗೆಲುವನ್ನು ಸಮನಾಗಿ ಸ್ವೀಕರಿಸುವ ಮೂಲಕ ಕ್ರೀಡಾ ಸ್ಫೂರ್ತಿ ಮೆರೆಯುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣ ಗೌಡ ಹೇಳಿದರು.


ತಾಲೂಕಿನ ಸುತ್ತೂರಿನಲ್ಲಿ ಜಗದ್ಗುರು ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸಂಸ್ಮರಣೆಯ ಅಂಗವಾಗಿ 3 ದಿನಗಳ ಜೆಎಸ್‌ಎಸ್ ಅಂತರ-ಸಂಸ್ಥೆಗಳ ಕ್ರೀಡಾಕೂಟವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.


ಕ್ರೀಡೆಗಳನ್ನು ಪ್ರೋತ್ಸಾಹಿಸುತ್ತಿರುವ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಕಾರ್ಯ ನಿಜಕ್ಕೂ ಶ್ಲಾಘನೀಯ. ಶಿಕ್ಷಣದ ಜತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಒತ್ತು ನೀಡುತ್ತಾ ಬರುತ್ತಿದೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ನೀವೇ ಭಾಗ್ಯಶಾಲಿಗಳು. ಸುತ್ತೂರು ಶ್ರೀಗಳ ಈ ಸಂಸ್ಥೆಯಲ್ಲಿ ಅನೇಕ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಭಾಗವಹಿಸಲು ಪ್ರೋತ್ಸಾಹಿಸುತ್ತಿರುವುದೇ ಸಾಕ್ಷಿ. ಸರ್ಕಾರವೂ ಕ್ರೀಡಾಪಟುಗಳಿಗೆ ವಿಶೇಷವಾಗಿ ಪ್ರೋತ್ಸಾಹ ನೀಡುತ್ತಿದೆ ಎಂದರು.


ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗಿದೆ. ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸುತ್ತವೆ. ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಕ್ರೀಡಾಪಟುಗಳು ಭಾಗವಹಿಸುತ್ತಿರುವುದು ಸಂತಸ ತಂದಿದೆ ಎಂದರು.


ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ನ ರಾಜ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, ಜೆಎಸ್‌ಎಸ್ ಸಂಸ್ಥೆಯು ವಿದ್ಯಾರ್ಥಿಗಳ ಪಾಲಿಗೆ ಆಲದ ಮರವಿದ್ದಂತೆ. ವಿದ್ಯಾರ್ಥಿಗಳಿಗೆ ಆಶ್ರಯವನ್ನು ನೀಡುತ್ತಾ ಪೋಷಿಸುತ್ತಿದೆ. ಆಟ ಆಡುವುದರಿಂದ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ಸಿಗುತ್ತದೆ ಎಂದರು.


ಕ್ರೀಡಾಪಟುಗಳ ಪರವಾಗಿ ನಾರ್ವೆ ಜೆಎಸ್‌ಎಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಚೈತನ್ಯ ಹಾಗೂ ಕ್ರೀಡಾಧಿಕಾರಿಗಳ ಪರವಾಗಿ ದೈಹಿಕ ಶಿಕ್ಷಣ ಶಿಕ್ಷಕ ಬಿ.ಜಿ. ಪೂಜಾರ್ ಪ್ರತಿಜ್ಞಾವಿಧಿ ಸ್ವೀಕರಿಸಿದರು. 3 ದಿನಗಳ ಕ್ರೀಡಾಕೂಟದಲ್ಲಿ ಸುಮಾರು 3316 ವಿದ್ಯಾರ್ಥಿಗಳು ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಜೆಎಸ್‌ಎಸ್‌ನ ವಿವಿಧ ಸಂಸ್ಥೆಗಳಿಂದ ಆಗಮಿಸಿದ್ದ ಕ್ರೀಡಾ ತಂಡಗಳು ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿ, ಪಥಚಲನೆ ನಡೆಸಿದರು.


ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಿರಿಯ ಶ್ರೀ ಜಯರಾಜೇಂದ್ರರು, ಜೆಎಸ್‌ಎಸ್ ವಿದ್ಯಾಪೀಠ ಕಾರ್ಯದರ್ಶಿಗಳಾದ ಎಸ್.ಪಿ.ಮಂಜುನಾಥ್, ಎಸ್. ಶಿವಕುಮಾರಸ್ವಾಮಿ, ಆಡಳಿತಾಧಿಕಾರಿ ಎಸ್.ಪಿ.ಉದಯಶಂಕರ್, ಎಸ್ಟಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ಮೈಸೂರಿನ ವಿದ್ಯಾವರ್ಧಕ ಸಂಸ್ಥೆಗಳ ಅಧ್ಯಕ್ಷ ಗುಂಡಪ್ಪಗೌಡ, ಮಾಜಿ ಮಹಾಪೌರ ವಿಶ್ವನಾಥ್, ಕ್ರೀಡಾಕೂಟದ ಸಂಚಾಲಕ ಸಂಪತ್ ಉಪಸ್ಥಿತರಿದ್ದರು.