ತರೀಕೆರೆ: ದೇಶದ ರಕ್ಷಣೆಗೆ ಅವಿರತ ಶ್ರಮಿಸುವ ಸೈನಿಕರನ್ನು ಗೌರವಿಸುವುದು ಎಲ್ಲರ ಕರ್ತವ್ಯ ಎಂದು ಮುಖ್ಯಶಿಕ್ಷಕ ನಂಜುಂಡಪ್ಪ ಹೇಳಿದರು.
ಬೆಟ್ಟದಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರನ್ನು ಸನ್ಮಾನಿಸಿ ಮಾತನಾಡಿದರು.
ನಮ್ಮಲ್ಲಿ ರಾಷ್ಟ್ರಭಕ್ತಿ ಸದಾ ಜೀವಂತವಾಗಿರಬೇಕು. ಸೇನೆಯಲ್ಲಿ ಸೇವೆ ಸಲ್ಲಿಸುವುದು ಮಾತ್ರವಲ್ಲ, ಯಾವುದಾದರೂ ಒಂದು ರೂಪದಲ್ಲಿ ದೇಶದ ಋಣ ತೀರಿಸುವ ಕಾರ್ಯವಾಗಬೇಕು. ಮಕ್ಕಳು ದೇಶಾಭಿಮಾನ ರೂಢಿಸಿಕೊಳ್ಳಬೇಕು ಎಂದರು.
ಮಾಜಿ ಸೈನಿಕರಾದ ಎ.ಶಬ್ಬೀರ್ ಮತ್ತು ಜೆ.ಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಮಕ್ಕಳು ಭಾರತೀಯ ಸೈನಿಕರ ಪೋಷಾಕು ಧರಿಸಿ ಗಮನ ಸೆಳೆದರು. ಸಹ ಶಿಕ್ಷಕರಾದ ಚಂದ್ರಪ್ಪ, ನೂರ್ ಸಾದಿಕ್, ಕುಸುಮಾ ಮತ್ತಿತರರಿದ್ದರು.