ನ್ಯೂಸ್

ಸೈಕಲ್ ಮೂಲಕ ಸಿಟಿ ರೌಂಡ್ಸ್ ನಡೆಸಿದ ಜಿಲ್ಲಾಧಿಕಾರಿ / ನಗರಸಭೆಯ ಉದ್ಯಾನವನಗಳಿಗೆ ಭೇಟಿ ನೀಡಿ ಪರಿಶೀಲನೆ / ಉದ್ಯಾನವನಗಳ ಸೌಂದರ್ಯಕ್ಕೆ ಕಾಯಕಲ್ಪಕ್ಕೆ ಮುಂದಾದ ಜಿಲ್ಲಾಧಿಕಾರಿ ಎಂ.ಆರ್.ರವಿ

ವಿಜಯವಾಣಿ ಸುದ್ದಿಜಾಲ ಕೋಲಾರ

ನಗರದ ಪ್ರಮುಖ ಉದ್ಯಾನವನಗಳ ಸ್ಥಿತಿಗತಿ ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಭಾನುವಾರ ಬೆಳಿಗ್ಗೆ ಸೈಕಲ್‌ನಲ್ಲಿ ರೌಂಡ್ಸ್ ನಡೆಸಿ, ಉದ್ಯಾನವನಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಜಿಲ್ಲಾಧಿಕಾರಿಗಳಿಗೆ ಸಾಥ್ ನೀಡಿದರು.

ನಗರದ ಸರ್ವಜ್ಞ ಪಾರ್ಕ್, ಅಂಬೇಡ್ಕರ್ ಪಾರ್ಕ್, ಕುವೆಂಪು ಪಾರ್ಕ್ ಸೇರಿದಂತೆ ವಿವಿಧ ಉದ್ಯಾನವನಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಭೇಟಿಯು, ಇಂದಿನಿAದ ಆರಂಭಗೊAಡ 'ಸ್ವಚ್ಛತಾ ಹಿ ಸೇವಾ'ದ ಆಂದೋಲನದ ಭಾಗವಾಗಿತ್ತು. ಅಕ್ಟೋಬರ್ ೨ ರವರೆಗೆ ನಡೆಯಲಿರುವ ಈ ಅಭಿಯಾನದಲ್ಲಿ, ಪ್ರತಿ ಭಾನುವಾರ ನಗರದ ಎಲ್ಲಾ ಉದ್ಯಾನವನಗಳನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಚ್ಛಗೊಳಿಸಲು ನಿರ್ಧರಿಸಲಾಯಿತು.

ಪಾರ್ಕ್ಗಳ ನಿರ್ವಹಣೆಗೆ ಸೂಚನೆ :

ಪಾರ್ಕ್ಗಳಲ್ಲಿ ಅನಿಯಮಿತವಾಗಿ ಬೆಳೆದ ಗಿಡ-ಮರಗಳನ್ನು ಕತ್ತರಿಸಿ ಸರಿಪಡಿಸಲು ಡಿಸಿ ಸೂಚಿಸಿದರು. ಅಲ್ಲದೆ, ನಡಿಗೆ ಪಥವನ್ನು (ವಾಕಿಂಗ್ ಟ್ರ‍್ಯಾಕ್) ಸಮತಟ್ಟುಗೊಳಿಸಿ, ನಡೆದಾಡುವವರಿಗೆ ಅನುಕೂಲ ಕಲ್ಪಿಸಲು ಸೂಚಿಸಲಾಯಿತು. ಸುಮಾರು ೮೫ ವರ್ಷಗಳಷ್ಟು ಹಳೆಯದಾದ ಸರ್ವಜ್ಞ ಪಾರ್ಕ್ನಲ್ಲಿರುವ ಬ್ಯಾಂಡ್ ಸ್ಟಾಂಡ್ ಮತ್ತು ರೇಡಿಯೋ ಕಿಯೋಸ್ಕ್ ಅನ್ನು ದುರಸ್ತಿಪಡಿಸಿ ಬಣ್ಣ ಹಚ್ಚಿಸುವಂತೆ ತಿಳಿಸಿದರು.

ವಾರಾಂತ್ಯಗಳಲ್ಲಿ ಇಂತಹ ಸ್ಥಳಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲು ಚಿಂತಿಸೋಣ ಎಂದು ಸಲಹೆ ನೀಡಿದರು. ಎಲ್ಲಾ ಪಾರ್ಕ್ಗಳಲ್ಲಿ ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳು, ಕಾರಂಜಿಗಳು ಹಾಗೂ ವಿದ್ಯುತ್ ದೀಪಗಳನ್ನು ಸರಿಪಡಿಸಿ ಉತ್ತಮವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಳೆಗಾಲದಲ್ಲಿ ಪಾರ್ಕ್ಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಹಾಗೂ ಕೊಳಚೆ ನೀರು ಕಾಲುವೆಗಳಲ್ಲಿ ಕಸ ಸೇರದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ಕಸ ಸುರಿಯುವವರ ವಿರುದ್ಧ ಕ್ರಮ :

ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಕಸ ಸುರಿಯುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಸದರಿ ಸ್ಥಳಗಳಲ್ಲಿ ನಗರಸಭೆ ಅಧಿಕಾರಿಗಳು "ಕೋಲಾರಮ್ಮ ಸ್ವಚ್ಛತಾ ಕಾರ್ಯಪಡೆ"ಯನ್ನು ರಚಿಸಿ ಅವರಿಂದ ಕಣ್ಗಾವಲು ವಹಿಸುವಂತೆ ನಿರ್ದೇಶನ ನೀಡಿದರು.

`ಅಮೃತ್' ಯೋಜನೆಯಡಿ ಉದ್ಯಾನಗಳಿಗೆ ಕಾಯಕಲ್ಪ :

೧೫ನೇ ಹಣಕಾಸು ಯೋಜನೆಯಡಿ `ಅಮೃತ್ ನಗರೋತ್ಥಾನ' ಕಾರ್ಯಕ್ರಮದಡಿಯಲ್ಲಿ ಉದ್ಯಾನಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು. ಅಲ್ಲದೆ, ಪಾರ್ಕ್ಗಳಲ್ಲಿ ಸಂಗ್ರಹವಾಗುವ ಉದುರಿದ ಎಲೆಗಳು ಮತ್ತು ಹಸಿ ಕಸವನ್ನು ಪಾರ್ಕ್ನ ಒಂದು ಮೂಲೆಯಲ್ಲಿ ಗುಂಡಿ ತೋಡಿ ಸಂಗ್ರಹಿಸಿದರೆ ಅದರಿಂದ ಸಾವಯವ ಗೊಬ್ಬರ ತಯಾರಿಸಬಹುದು ಎಂದು ಸಲಹೆ ನೀಡಿದರು.

ಸಾರ್ವಜನಿಕ ಸಹಭಾಗಿತ್ವಕ್ಕೆ ಒತ್ತು :

ಅಧಿಕಾರಿಗಳು ಎಷ್ಟೇ ಕೆಲಸ ಮಾಡಿದರೂ ಸಾರ್ವಜನಿಕರ ಸಹಕಾರ ಇಲ್ಲದೆ ಸ್ವಚ್ಛತೆ ಸಾಧ್ಯವಿಲ್ಲ. ಆದ್ದರಿಂದ, ನಗರಸಭೆ ಅಧಿಕಾರಿಗಳೊಂದಿಗೆ ನಾಗರಿಕರು ಕೈಜೋಡಿಸಬೇಕು. ಪಾರ್ಕ್ಗಳನ್ನು ಸ್ವಚ್ಛವಾಗಿಡುವಂತೆ ಮನವಿ ಮಾಡುವ ಹಾಗೂ ವ್ಯಾಯಾಮ ಪರಿಕರಗಳನ್ನು ಬಳಸುವ ಕ್ರಮ ಕುರಿತ ಫಲಕಗಳನ್ನು ಅಳವಡಿಸುವಂತೆಯೂ ಸೂಚಿಸಲಾಯಿತು.

ನಾಗರಿಕ ವೇದಿಕೆ ರಚನೆಗೆ ಕರೆ :

ನಗರದ ಸಮಾನ ಮನಸ್ಕರು ಸೇರಿ ಸಮಿತಿ ರಚಿಸಿಕೊಂಡು ಉದ್ಯಾನಗಳ ನಿರ್ವಹಣೆ ಮತ್ತು ಸ್ವಚ್ಛತಾ ಪಾಲನೆಗೆ ಆಸಕ್ತಿ ವಹಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು. ಮಕ್ಕಳಿಗೆ ಇದಕ್ಕಿಂತ ಉತ್ತಮ ಸ್ಥಳ ಸಿಗಲು ಸಾಧ್ಯವಿಲ್ಲ ಎಂದರು.

ಸ್ವಚ್ಛತಾ ಆಂದೋಲನವು ಅಕ್ಟೋಬರ್ ೨ರವರೆಗೆ ನಡೆಯಲಿದ್ದು, ಪ್ರತಿಯೊಬ್ಬರೂ `ಸ್ವಚ್ಛ ಭಾರತ, ಸ್ವಚ್ಛ ಕೋಲಾರ' ಎಂಬ ಧ್ಯೇಯದೊಂದಿಗೆ ಇದರಲ್ಲಿ ಪಾಲ್ಗೊಳ್ಳಬೇಕು. ಸ್ವಚ್ಛತೆ ಅಭಿಯಾನ ವ್ಯಕ್ತಿ ಮತ್ತು ಮನೆಗಳಿಂದಲೇ ಆರಂಭವಾಗಬೇಕು ಎಂದರು.

`ಸ್ವಚ್ಛತಾ ಹಿ ಸೇವಾ ಅಭಿಯಾನ'ದ ನೆನಪಿಗಾಗಿ ಕೋಲಾರದಲ್ಲಿರುವ ಒಟ್ಟು ೧೯ ಪಾರ್ಕ್ಗಳಲ್ಲಿ ಸಸಿಗಳನ್ನು ನೆಡಲಾಯಿತು.

ನಗರಸಭೆ ಅಧ್ಯಕ್ಷೆ ಲಕ್ಷ್ಮಿ ದೇವಮ್ಮ ರಮೇಶ್, ಉಪಾಧ್ಯಕ್ಷೆ ಸಂಗೀತಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಅಂಬಿಕಾ, ಶ್ರೀನಿವಾಸ್, ನಗರಸಭೆ ಆಯುಕ್ತ ನವೀನ್ ಚಂದ್ರ ಮತ್ತು ಆರೋಗ್ಯ ನಿರೀಕ್ಷಕ ನವಾಜ್ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.

ಚಿತ್ರ ೦೭ ಕೆ.ಎಲ್.ಆರ್. ೦೧ : ಕೋಲಾರದಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿ ಸೈಕಲ್ ಮೂಲಕ ಸಿಟಿ ರೌಂಡ್ಸ್ ಮಾಡಿದರು.

ಚಿತ್ರ ೦೭ ಕೆ.ಎಲ್.ಆರ್. ೦೧ಎ : ಉದ್ಯಾನವನಗಳ ಅಂದ ಹೆಚ್ಚಿಸಲು ಉದ್ಯಾನವನಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಮಾತನಾಡುತ್ತಿರುವುದು.