ನ್ಯೂಸ್

ಸೇವೆಯೇ ಪಹರೆಯ ಗುರಿ

ವಿಜಯವಾಣಿ ವಿಶೇಷ ಕಾರವಾರ ಯಾವುದೇ ಫಲಾಪೇಕ್ಷೆ ಇಲ್ಲದ ಸ್ವಯಂ ಸೇವಾ ಸಂಘಟನೆಗಳು ಹೆಚ್ಚು ದಿನ ನಡೆಯುವುದು ಅಪರೂಪ. ಆದರೆ, ಕಾರವಾರದ ಸಂಘಟನೆಯೊಂದು ಸ್ವಚ್ಛತಾ ಕಾರ್ಯದಲ್ಲಿ ಆರು ವರ್ಷಗಳನ್ನು ಪೂರೈಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಣೆಗೊಂಡು ವಕೀಲ ನಾಗರಾಜ ನಾಯಕ ಅವರು ನಗರದಲ್ಲಿ ಪಹರೆ ವೇದಿಕೆಯಿಂದ ಪ್ರತಿ ಶನಿವಾರ ಸ್ವಚ್ಛತಾ ಕಾರ್ಯವನ್ನು 2015ರ ಜ.3ರಿಂದ ಪ್ರಾರಂಭಿಸಿದ್ದರು. ಅಂದಿನ ಜಿಲ್ಲಾಧಿಕಾರಿ ಉಜ್ವಲ ಕುಮಾರ ಘೊಷ್ ಅವರು ಸ್ವಚ್ಛತೆಗೆ ಚಾಲನೆ ನೀಡಿದ್ದರು. ಅಲ್ಲದೆ, ಕೆಲ ವಾರ ಸ್ವತಃ ಭಾಗವಹಿಸಿದ್ದರು. ಕರೊನಾ ಲಾಕ್​ಡೌನ್​ನ ಕೆಲ ವಾರ ಬಿಟ್ಟರೆ ಮಳೆ, ಚಳಿ, ಬೇಸಿಗೆ ಎಲ್ಲ ಕಾಲದಲ್ಲೂ ಪಹರೆ ಸದಸ್ಯರು ನಿರಂತರವಾಗಿ ಕಳೆದ 315 ವಾರಗಳಿಂದ ಬೆಳಗ್ಗೆ 1 ತಾಸು ನಗರದ ವಿವಿಧೆಡೆ ಸ್ವಚ್ಛತಾ ಕಾರ್ಯ ನಡೆಸಿಕೊಂಡು ಬಂದಿದ್ದಾರೆ.

ಗಿಡಗಳ ರಕ್ಷಣೆ: ಇದುವರೆಗೆ ಪಹರೆ ವೇದಿಕೆಯಿಂದ ನಗರದಲ್ಲಿ 250 ಟನ್​ಗೂ ಅಧಿಕ ಕಸವನ್ನು ತೆರವುಗೊಳಿಸ ಲಾಗಿದೆ. ಸ್ವಚ್ಛತೆ ಮಾತ್ರವಲ್ಲದೆ, ಗಿಡ ನೆಟ್ಟು ಪೋಷಿಸುವ ಕಾರ್ಯವನ್ನೂ ಪಹರೆ ಮಾಡುತ್ತಿದೆ. ಕಾರವಾರ-ಕೋಡಿಬಾಗ ರಸ್ತೆಯ ವಿಭಜಕಗಳ ನಡುವೆ 580 ಗಿಡಗಳನ್ನು ನೆಟ್ಟು ನಗರಸಭೆಯ ಸಹಕಾರದಿಂದ ನೀರು ಹಾಕಿ ಪೋಷಿಸಲಾಗುತ್ತಿದೆ. ಜಲ ಸಂರಕ್ಷಣೆಗಾಗಿ ಗಂಗಾವಳಿ ನದಿ, ನಗರಸಭೆಯ ಗಾರ್ಡನ್ ಕೆರೆ, ವಿಭೂತಿ ಹಳ್ಳವನ್ನು ಸ್ವಚ್ಛಗೊಳಿಸಲಾಗಿದೆ.

ವಿವಿಧ ಘಟ್ಟಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಪ್ರಸಿದ್ಧ ವ್ಯಕ್ತಿಗಳಾದ ಇಬ್ರಾಹಿಂ ಸುತಾರ, ಸಾಲುಮರದ ತಿಮ್ಮಕ್ಕ, ಚಿತ್ರದುರ್ಗ ಮುರುಘಾ ಶರಣರು, ಸುರೇಶ ಹೆಬ್ಳೀಕರ್, ತುಳಸಿ ಗೌಡ, ಸುಕ್ರಿ ಗೌಡ ಮುಂತಾದವರನ್ನು ಕರೆಸಿ ಜಾಗೃತಿ ಮೂಡಿಸಲಾಗಿದೆ. ಅಲ್ಲದೆ, ನಗರದ ಬಹುತೇಕ ಎಲ್ಲ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು, ನಾಮಾಂಕಿತರು ಒಂದಲ್ಲ ಒಂದು ಸಂದರ್ಭದಲ್ಲಿ ಈ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

ವಿವಿಧೆಡೆ ಸ್ವಚ್ಛತೆ: ಪಹರೆ ವೇದಿಕೆಯಿಂದ ಇದುವರೆಗೆ ಕಾಳಿ ಮಾತಾ ದ್ವೀಪ, ಲೇಡಿ ಕಡಲ ತೀರ, ಯಾಣ ಸೇರಿ ಇತರೆಡೆಯೂ ಸ್ವಚ್ಛತೆ ಕಾರ್ಯ ಕೈಗೊಂಡಿದ್ದಾರೆ.

ವಾರದಲ್ಲಿ ಒಂದು ದಿನ ಸ್ವಚ್ಛತೆ ಕಾರ್ಯ ಕೈಗೊಳ್ಳುವುದರಿಂದ ನಗರ ಸಂಪೂರ್ಣ ಕ್ಲೀನ್ ಆಗಿಬಿಡುತ್ತದೆ ಎಂಬ ಭ್ರಮೆ ನಮ್ಮಲ್ಲಿಲ್ಲ. ಆದರೆ, ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ. ಯಾವುದೋ ಪ್ರಶಸ್ತಿ ಅಥವಾ ಲಾಭದ ಉದ್ದೇಶ ಇಟ್ಟುಕೊಳ್ಳದೆ ಕೇವಲ ಸೇವೆಯನ್ನೇ ಗುರಿಯಾಗಿಸಿ ಕೆಲಸ ಮಾಡುತ್ತಿರುವುದರಿಂದ ಸಂಘಟನೆ ದೀರ್ಘಕಾಲದಿಂದ ಯಶಸ್ವಿಯಾಗಿ ಮುನ್ನಡೆದಿದೆ. | ನಾಗರಾಜ ನಾಯಕ ಪಹರೆ ವೇದಿಕೆಯ ಅಧ್ಯಕ್ಷ