ನ್ಯೂಸ್

ಸೇವೆ ಮಾಡುವ ಮನೋಭಾವ ಮುಖ್ಯ

ಬೆಟ್ಟದಪುರ: ಜನಪ್ರತಿನಿಧಿಯಾಗುವ ವ್ಯಕ್ತಿಗೆ ಸಮಾಜ ಸೇವೆ ಮಾಡುವ ವಿಶೇಷ ಮನೋಭಾವ ಇರಬೇಕು ಎಂದು ಶಾಸಕ ಕೆ.ಮಹದೇವ್ ಅಭಿಪ್ರಾಯಪಟ್ಟರು.
ಬೆಟ್ಟದಪುರ ಸಮೀಪದ ಕೊಣಸೂರು ಗ್ರಾಮದಲ್ಲಿ ಜೆಡಿಎಸ್ ಆಯೋಜಿಸಿದ್ದ ಭುವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯದ ನಾಯಕತ್ವ ಶಾಶ್ವತವಲ್ಲ. ಅಧಿಕಾರದಲ್ಲಿ ಇರುವ ನಾಲ್ಕು ದಿನ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಮನಸು ಮೆಚ್ಚಿದ್ದರೆ ಮಾತ್ರ ಮನುಷ್ಯನಾಗಲು ಸಾಧ್ಯ ಎಂದರು. ನನ್ನ ಅಧಿಕಾರ ಅವಧಿಯಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯ ಕೆಲಸಗಳ ಬಗ್ಗೆ ಕಾಂಗ್ರೆಸ್‌ನವರಿಗೆ ನುಂಗಲಾರದ ತುತ್ತಾಗಿದೆ. ಇದನ್ನು ಸಹಿಸದವರು ಇಲ್ಲಸಲ್ಲದ ಆರೋಪ ಮಾಡುತ್ತ ತಮ್ಮಲ್ಲಿನ ನೀಚತನವನ್ನು ಪ್ರದರ್ಶಿಸುತ್ತಿದ್ದಾರೆ. ಮತದಾರರು ಇದನ್ನು ಅರ್ಥ ಮಾಡಿಕೊಂಡು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು ಎಂದರು.
ಮೈಮಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಮಾತನಾಡಿ ನಾವು ಸೀಮೆಎಣ್ಣೆ ಮಾರಾಟ ಮಾಡಿ ಬದುಕುತ್ತಿದ್ದ ಬಡ ಕುಟುಂಬ. ತಾಲೂಕಿನ ಜನತೆಯ ಆಶೀರ್ವಾದದಿಂದ ನಮ್ಮ ತಂದೆ ಶಾಸಕರಾಗಿ ಜನ ಸೇವೆ ಮಾಡುತ್ತಿದ್ದಾರೆ. ಆದರೆ ಮಾಜಿ ಶಾಸಕರು ನಮ್ಮ ಬಡತನವನ್ನು ಹೀಯಾಳಿಸುತ್ತಾ ದುರ್ನಡತೆ ಪ್ರದರ್ಶನ ಮಾಡುತ್ತಿದ್ದಾರೆ. ತಾಲೂಕಿನ ಜನತೆ ವಿರೋಧಿಗಳ ಅಪಪ್ರಚಾರಕ್ಕೆ ಕಿವಿಗೂಡಬಾರದು ಎಂದರು.