ನ್ಯೂಸ್

ಸೇವೆ ಮರೆತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ

ಮುಳಬಾಗಿಲು: ಪ್ರಯಾಣಿಕರೇ ದೇವರು ಎಂಬ ಧ್ಯೇಯೋದ್ದೇಶ ದೊಂದಿಗೆ ಈ ಹಿಂದೆ ಸಾರಿಗೆ ಸಂಸ್ಥೆ ಕಾರ್ಯನಿರ್ವಹಿಸುತ್ತಿತ್ತು. ಪ್ರಸ್ತುತ ಪ್ರಯಾಣಿಕರನ್ನು ರ್ನಿಲಕ್ಷಿಸುವ ಸಂಸ್ಥೆಯಾಗಿ ಕೆಎಸ್​ಆರ್​ಟಿಸಿ ವರ್ತನೆ ಬದಲಾಯಿಸಿಕೊಳ್ಳುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಕರೊನಾ ಲಾಕ್​ಡೌನ್​ ಮುಂಚೆ ಇದ್ದ ಕೆಎಸ್​ಆರ್​ಟಿಸಿ ವ್ಯವಸ್ಥೆಗೂ ಹೀಗಿರುವ ವ್ಯವಸ್ಥೆಗೂ ವ್ಯತ್ಯಾಸವಾಗಿದ್ದು, ಜನಸೇವೆ ಎಂಬುದನ್ನು ಮರೆತಂತೆ ಕಾಣುತ್ತಿದೆ. ಅಧಿಕಾರಿಗಳು ಕಚೇರಿ ಬಿಟ್ಟು ಹೊರಬರದೆ ಇರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಮುಳಬಾಗಿಲಿನಿಂದ ಕೋಲಾರ, ಬೆಂಗಳೂರಿಗೆ ಪ್ರತಿನಿತ್ಯ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಬೆಳೆಸುತ್ತಾರೆ. ಆದರೆ ಬೆಳಗ್ಗೆ 9 ರಿಂದ 10ರವರೆಗೂ ಕೋಲಾರ, ಬೆಂಗಳೂರಿಗೆ ಕೆಎಸ್​ಆರ್​ಟಿಸಿ ಬಸ್​ಗಳಿಲ್ಲದೆ ಖಾಸಗಿ ಬಸ್​ಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಉಂಟಾಗಿದೆ.

ನಿತ್ಯಪರದಾಟ: ಕೆಎಸ್​ಆರ್​ಟಿಸಿ ಬಸ್​ಪಾಸ್​ ಪಡೆದು, ಸಮಯಕ್ಕೆ ಸರಿಯಾಗಿ ಬಸ್​ ವ್ಯವಸ್ಥೆ ಇಲ್ಲದೆ ನಿತ್ಯ ಪರದಾಡುವಂತಾಗಿದೆ. ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲಾ&ಕಾಲೇಜುಗಳಿಗೆ ಹೋಗಲು ಖಾಸಗಿ ಬಸ್​ಗಳಲ್ಲಿ ಹಣ ನೀಡಿ ಹೋಗಬೇಕಾದ ಸ್ಥಿತಿ ನಿಮಾರ್ಣವಾಗುತ್ತಿದೆ.

ಅಲ್ಲದೆ ಕಾಂತರಾಜ ಸರ್ಕಲ್​ನ ಡಿಪ್ಲೊಮಾ ಕಾಲೇಜು, ದೇವರಾಯಸಮುದ್ರದ ಐಟಿಐ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಬಸ್​ ವ್ಯವಸ್ಥೆಯಿಲ್ಲದೆ ಆಟೋ, ಖಾಸಗಿ ಬಸ್​ಗಳ ಟಾಪ್​ ಮೇಲೆ ಕುಳಿತು ಪ್ರಯಾಣಿಸಬೇಕಾದ ಪರಿಸ್ಥಿತಿಯಿದೆ.

ಕರೊನಾ ಲಾಕ್​ಡೌನ್​ ನಂತರ ಗ್ರಾಮಾಂತರ ಪ್ರದೇಶದಲ್ಲಿ ತಂಗುವ ಬಸ್​ಗಳ ಸೇವೆ ಸ್ಥಗಿತಗೊಳಿಸಲಾಗಿದೆ. ಬೆಳಗ್ಗೆ 9ರಿಂದ ಕೋಲಾರದ ಸರ್ಕಾರಿ ಕಚೇರಿಗಳಿಗೆ ತೆರಳುವ ಸಿಬ್ಬಂದಿ, ನ್ಯಾಯಾಲಯಗಳಿಗೆ ಹೋಗಬೇಕಾದ ಕಕ್ಷಿದಾರರು, ವಕೀಲರ ಸಂಖ್ಯೆ ಹೆಚ್ಚಾಗಿದ್ದು, ಈ ಸಮಯಕ್ಕೆ ಹೆಚ್ಚುವರಿ ಬಸ್​ ವ್ಯವಸ್ಥೆ ಮಾಡಿ ಕೆಎಸ್​ಆರ್​ಟಿಸಿ ಪ್ರಯಾಣಿಕರ ಸೇವೆಗೆ ಮುಂದಾಗಬೇಕಿದೆ.

ಬೆಳಗ್ಗೆ 9 ರಿಂದ 10 ಗಂಟೆಯವರೆಗೂ ಹೆಚ್ಚುವರಿ ಬಸ್​ಗಳನ್ನು ನಿಯೋಜನೆ ಮಾಡಿ ಪ್ರಯಾಣಿಕರ ಸೇವೆ ಸಲ್ಲಿಸಲಾಗುವುದು. - ಅನ್ಸರ್​ ಪಾಷಾ ಪ್ರಭಾರ ವ್ಯವಸ್ಥಾಪಕ ಕೆಎಸ್​ಆರ್​ಟಿಸಿ ಘಟಕ ಮುಳಬಾಗಿಲು ಬೆಳಗ್ಗೆ 9 ರಿಂದ 10ರೊಳಗೆ ಹೆಚ್ಚಿನ ಸಾರಿಗೆ ವ್ಯವಸ್ಥೆ ಮಾಡಲು ಘಟಕ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗುವುದು. ಗ್ರಾಮೀಣ ಪ್ರದೇಶದ ಹಾಲ್ಟ್​ ಬಸ್​ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು. - ಜೈಶಾಂತ್​ ಕುಮಾರ್​, ಡಿಟಿಒ ಕೆಎಸ್​ಆರ್​ಟಿಸಿ ಕೋಲಾರ ಗ್ರಾಮೀಣ ಪ್ರದೇಶದ ಬಸ್​ ವ್ಯವಸ್ಥೆ ತುಂಬಾ ಅಧ್ವಾನವಾಗಿದೆ. ಹಲವು ಬಾರಿ ಕೆಎಸ್​ಆರ್​ಟಿಸಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಖಾಸಗಿ ಬಸ್​ ಮಾಲೀಕ ರೊಂದಿಗೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಅನುಮಾನ ಕಾಡುತ್ತಿದೆ. - ಚಲ್ಲಪ್ಪಲ್ಲಿ ಕೃಷ್ಣಾರೆಡ್ಡಿ ರೈತ ಸೇನೆ ಜಿಲ್ಲಾಧ್ಯಕ್ಷ