ತಿ.ನರಸೀಪುರ ಪಟ್ಟಣದಲ್ಲಿ ವರುಣಾ ಕ್ಷೇತ್ರ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿವಿಧ ಸಮಿತಿಗಳಿಗೆ ನಾಮ ನಿರ್ದೇಶನ ಸದಸ್ಯರಾಗಿ ನೇಮಕ ಗೊಂಡ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು . 
ನ್ಯೂಸ್

ಸೇವಾ ಕಾರ್ಯ ಕೈಗೊಂಡು ಮೋದಿ ಹುಟ್ಟುಹಬ್ಬ ಆಚರಿಸಿ

ತಿ.ನರಸೀಪುರ: ಪಕ್ಷದ ಕಾರ್ಯಕರ್ತರು ವಿವಿಧ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಬೇಕೆಂದು ವರುಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಕಲ್ಮಳ್ಳಿ ವಿಜಯಕುಮಾರ್ ಮನವಿ ಮಾಡಿದರು.


ವರುಣ ಕ್ಷೇತ್ರದ ಹಿರಿಯ ಬಿಜೆಪಿ ಮುಖಂಡರನ್ನು ಗುರುತಿಸಿ ಸರ್ಕಾರ ವಿವಿಧ ಸಮಿತಿಗಳಲ್ಲಿ ನಾಮನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಿದ ಹಿನ್ನೆಲೆಯಲ್ಲಿ ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ನೂತನ ಸದಸ್ಯರನ್ನು ಸನ್ಮಾನಿಸಿ ಅವರು ಮಾತನಾಡಿದರು.


ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ 17ರಿಂದ ಅಕ್ಟೋಬರ್ 2 ರವರೆಗೆ ಪಕ್ಷವು ವಿವಿಧ ಸೇವಾ ಕಾರ್ಯಗಳನ್ನು ಮಾಡುವಂತೆ ಆದೇಶ ನೀಡಿದೆ. ಸ್ವಚ್ಛತಾ ಕಾರ್ಯ, ರಕ್ತದಾನ ಶಿಬಿರ ಹಾಗೂ ಕಲ್ಯಾಣಿಗಳ ಜೀರ್ಣೋದ್ಧಾರ ಮಾಡುವ ಜತೆಗೆ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಕಾರ್ಯಕರ್ತರೆಲ್ಲರೂ ಖಾದಿ ಬಟ್ಟೆ ಧರಿಸುವಂತೆ ಮನವಿ ಮಾಡಿದರು.


ಮುಖಂಡ ಸಿ.ಎಂ.ಮಹದೇವಯ್ಯ ಮಾತನಾಡಿ, ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಅಧಿಕಾರ ನೀಡುವ ಏಕೈಕ ಪಕ್ಷ ಬಿಜೆಪಿ. ರಾಜ್ಯ ಮತ್ತು ಕೇಂದ್ರ ಸರ್ಕಾರ ಅನೇಕ ಜನ ಪರ ಕೆಲಸ ಮಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಮುಂದಿಟ್ಟಿದೆ. ಸರ್ಕಾರ ಜಾರಿಗೆ ತಂದಿರುವ ಜನೋಪಯೋಗಿ ಕಾರ್ಯಕ್ರಮಗಳ ಬಗ್ಗೆ ನೂತನ ಸದಸ್ಯರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಮುಂದಿನ ದಿನಗಳಲ್ಲಿ ಪಕ್ಷದ ಅಭಿವೃದ್ಧಿ ಜತೆಗೆ,ಬಲವರ್ಧನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ನಾಮನಿರ್ದೇಶನ ಸದಸ್ಯರಾಗಿ ನೇಮಕವಾದ ಬೈರಾಪುರ ಬಾಲು, ಕೆ.ಗಣೇಶ್, ಮಿಥುನ್, ನರಸಿಂಹಮೂರ್ತಿ, ಶ್ರೀಧರ್, ಚಿಕ್ಕ ಮಹದೇವು, ಸರ್ವಮಂಗಳಾ ಸೋಮಶೇಖರ್ ಹಾಗೂ ಹುಣಸೂರು ರಾಜಪ್ಪ ಅವರನ್ನು ಸನ್ಮಾನಿಸಲಾಯಿತು.