ಬಣಕಲ್: ತರುವೆ ಗ್ರಾಮದ ಸುರೇಶ್ ನಾಯ್ಕ ಎಂಬುವವರ ಕುಟುಂಬಕ್ಕೆ ಕಾಲುಸಂಕದಲ್ಲಿ ಹೊಳೆ ದಾಟುವ ಸಮಸ್ಯೆಗೆ ಮುಕ್ತಿ ದೊರೆತಿದ್ದು, 30 ಲಕ್ಷ ರೂ.ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ.
ಸುರೇಶ್ ನಾಯ್ಕ ಅವರಿಗೆೆ ಮಳೆಗಾಲದಲ್ಲಿ ಶಿಥಿಲವಾದ ಕಾಲುಸಂಕ ದಾಟಿ ಜೀವನ ನಡೆಸುವ ಅನಿವಾರ್ಯತೆ ಇತ್ತು. ತುಂಬಿ ಹರಿಯುವ ಕಿರುಹಳ್ಳ ಮಳೆಗಾಲದಲ್ಲಿ ಸುರೇಶ್ ಮನೆಯ ಗೇಟ್‌ವರೆಗೆ ಬಂದು ಸಮಸ್ಯೆಯಾಗುತ್ತಿತ್ತು. ಈ ಬಗ್ಗೆ ತಿಳಿದ ಕೂಡಲೇ ಶಾಸಕಿ ನಯನಾ ಮೋಟಮ್ಮ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ ಸರ್ಕಾರದ ಗಮನ ಸೆಳೆದಿದ್ದರು.
ಇದೀಗ ಶಾಸಕರ 30 ಲಕ್ಷ ರೂ. ಅನುದಾನದಲ್ಲಿ ಗುತ್ತಿಗೆದಾರ ಪದ್ಮಾನಂದನ್ ಭಟ್ ಕಾಮಗಾರಿ ವಹಿಸಿಕೊಂಡು ಭಾನುವಾರ ಕೆಲಸ ಆರಂಭಿಸಿದ್ದಾರೆ. ಇದರಿಂದ ಪರಿಶಿಷ್ಟ ಪಂಗಡದ ಸುರೇಶ್ ನಾಯ್ಕ ಕುಟುಂಬದ ರಸ್ತೆ ಸಮಸ್ಯೆಗೆ ಮುಕ್ತಿ ಸಿಕ್ಕಿದಂತಾಗಿದೆ. ಅಕ್ಕಪಕ್ಕದ ಕೃಷಿಕರಿಗೂ ರಸ್ತೆ ಸೌಲಭ್ಯ ದೊರೆಯುವಂತಾಗಿದೆ.
ಗ್ರಾಮಸ್ಥರ ಅನುಕೂಲಕ್ಕಾಗಿ ಗುಣಮಟ್ಟದ ಸೇತುವೆ ಕಾಮಗಾರಿ ನಡೆಸಲಾಗುವುದು. 30 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ಕಾಮಗಾರಿ ನಡೆಯಲಿದೆ ಎಂದು ಗುತ್ತಿಗೆದಾರ ಪದ್ಮಾನಂದನ್ ಭಟ್ ತಿಳಿಸಿದ್ದಾರೆ.