ಹುಣಸೂರು: ಪ್ರಸಕ್ತ ಸಾಲಿನ ತಂಬಾಕು ಮಾರುಕಟ್ಟೆಯನ್ನು ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲೇ ಆರಂಭಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ತಂಬಾಕು ಮಂಡಳಿಯನ್ನು ಒತ್ತಾಯಿಸಿದ್ದಾರೆ.
ಎರಡು ವರ್ಷಗಳಿಂದ ರಾಜ್ಯದಲ್ಲಿ ತಂಬಾಕು ಬೆಳೆಯು ಮಂಡಳಿ ನಿಗದಿಪಡಿಸಿದ ಪ್ರಮಾಣದಲ್ಲಿ(99ಮಿಲಿಯನ್ ಕೆ.ಜಿ.) ಬೆಳೆಯಲು ರೈತರಿಗೆ ಸಾಧ್ಯವಾಗಿಲ್ಲ. ಕಾರಣ ಕಳೆದ ವರ್ಷ ಅತಿವೃಷ್ಟಿಯಾದರೆ, ಈ ವರ್ಷ ಬರದ ಛಾಯೆ ರೈತರನ್ನು ಕಂಗೆಡಿಸಿದೆ. 60-70 ಮಿಲಿಯನ್ ಕೆ.ಜಿ. ತಂಬಾಕು ಸಿಗುವುದು ಕೂಡ ಅನುಮಾನವಾಗಿದೆ. ಈಗಾಗಲೇ ಶೇ.80ರಷ್ಟು ರೈತರು ಬೆಳೆದ ತಂಬಾಕನ್ನು ಹದಗೊಳಿಸಿ, ವಿಂಗಡಣೆ ಮಾಡಿ ಮಾರುಕಟ್ಟೆಗೆ ಮಾರಾಟಕ್ಕೆ ಸಜ್ಜುಗೊಂಡಿದ್ದಾರೆ. ಈ ನಡುವೆ ಕಾಳಸಂತೆಯಲ್ಲಿ ರೈತರಿಂದ ತಂಬಾಕನ್ನು ಕೆಲವು ಖಾಸಗಿ ವ್ಯಕ್ತಿಗಳು ಖರೀದಿಸುತ್ತಿದ್ದಾರೆ. ಇದರಿಂದ ರೈತರಿಗೆ ಅನ್ಯಾನವಾಗುವ ಜತೆಗೆ ಮಾರುಕಟ್ಟೆಯ ಮೇಲೂ ಇದು ಪರಿಣಾಮ ಬೀರಲಿದೆ.
ಹಾಗಾಗಿ ಈ ಎಲ್ಲ ಅನಾಹುತಗಳನ್ನು ತಡೆಯಲು ತಂಬಾಕು ಮಂಡಳಿ ಸೆಪ್ಟೆಂಬರ್ ಮೊದಲ ವಾರದಲ್ಲೇ ಮಾರುಕಟ್ಟೆ ಆರಂಭಿಸಬೇಕು. ಕೂಡಲೇ ಮಂಡಳಿಯು ಮಾರುಕಟ್ಟೆ ಆರಂಭದ ದಿನಾಂಕವನ್ನು ಘೋಷಿಸಬೇಕು. ಆ ಮೂಲಕ ತಂಬಾಕು ಕಾಳಸಂತೆ ನಿಯಂತ್ರಿಸಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.