ನ್ಯೂಸ್

ಸೆಪ್ಟೆಂಬರ್ ಅಂತ್ಯದೊಳಗೆ ಚಿಲ್ಕುಂದ ಯೋಜನೆ ಪೂರ್ಣ

ಹನಗೋಡು : ಹನಗೋಡು ಹೋಬಳಿಯ ಚಿಲ್ಕುಂದ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿ ಸೇವೆಗೆ ಸಮರ್ಪಿಸಲಾಗುವುದೆಂದು ಸಣ್ಣ ನೀರಾವರಿ ಸಚಿವ ಬೋಸರಾಜು ತಿಳಿಸಿದರು.
ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಶನಿವಾರ ಸಂಜೆ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 14 ಕೆರೆಗಳಿಗೆ ನೀರು ತುಂಬಿಸುವ ಚಿಲ್ಕುಂದ ಯೋಜನೆ ತಾಲೂಕಿಗೆ ಮಹತ್ವದ್ದಾಗಿದೆ. ಕಾಮಗಾರಿ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ ಎಂದರು.
ಕೆರೆಗಳಿಗೆ ನಾಲೆ ಮೂಲಕ ನೀರು ತುಂಬಿಸುವುದರಿಂದ ನೀರು ಪೋಲಾಗುವುದನ್ನು ತಪ್ಪಿಸಬಹುದು. ಈ ಯೋಜನೆಯಿಂದ ಹೆಚ್ಚುವರಿಯಾಗಿ 6 ಕೆರೆಗಳಿಗೆ ನೀರು ತುಂಬಿಸುವ ಬಗ್ಗೆ ಪರಿಶೀಲಿಸಿ ಕ್ರಿಯಾ ಯೋಜನೆ ಸಲ್ಲಿಸಲು ಇಂಜಿನಿಯರ್‌ಗಳಿಗೆ ಸೂಚಿಸಿದ್ದೇನೆ ಎಂದು ಸಚಿವರು ಹೇಳಿದರು.
ಸಮಸ್ಯೆ ಪರಿಹರಿಸಿ: ಕೆ.ಆರ್.ನಗರ ತಾಲೂಕಿನ ಜಪದಕಟ್ಟೆ ಚುಂಚನಕಟ್ಟೆ ಏತನೀರಾವರಿ ಯೋಜನೆಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಪೈಪ್‌ಲೈನ್ ಅಳವಡಿಸಲು ಇರುವ ಸಮಸ್ಯೆ ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಎರಡೂ ಯೋಜನೆಗಳನ್ನು ಪ್ರಾಯೋಗಿಕವಾಗಿ ಆರಂಭಿಸಿ ಅಲ್ಲಲ್ಲಿ ಕಂಡು ಬರುವ ಸಮಸ್ಯೆಗಳನ್ನು ಪರಿಹರಿಸಿ ಏಕಕಾಲದಲ್ಲಿ ಉದ್ಘಾಟಿಸಲಾಗುವುದು ಎಂದು ಬೋಸರಾಜು ತಿಳಿಸಿದರು. ಸಣ್ಣ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಕೆ.ರಾಘವನ್, ಅಧೀಕ್ಷಕ ಇಂಜಿನಿಯರ್ ವಿನಾಯಕ್, ಎಇಇ ಈಶ್ವರ್, ಕಾಂಗ್ರೆಸ್ ಮುಖಂಡರಾದ ಕಲ್ಕುಣಿಕೆ ರಮೇಶ್, ಬಿಳಿಕೆರೆ ಬಸವರಾಜು, ಪುಟ್ಟರಾಜು ಇತರರು ಇದ್ದರು.