ಬೆಂಗಳೂರು: ಮುಡಾ ಅಕ್ರಮ ನಿವೇಶನ ಹಂಚಿಕೆ ಹಗರಣ ಸಂಬಂಧ ಬಂಧನಕ್ಕೊಳಗಾಗಿರುವ ಮುಡಾ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್‌ನನ್ನು ಸೆ.೨೬ರ ವರೆಗೆ ಜಾರಿ ನಿರ್ದೇಶನಾಲಯದ(ಇ.ಡಿ.) ಕಸ್ಟಡಿಗೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ಶಾಂತಿನಗರದ ಇ.ಡಿ.ಕಚೇರಿಗೆ ಹಾಜರಾಗಿದ್ದ ದಿನೇಶ್ ಕುಮಾರ್ ಅವರನ್ನು ವಿಚಾರಣೆ ನಡೆಸಿದ್ದ ಅಧಿಕಾರಿಗಳು ಬಳಿಕ ಬಂಧಿಸಿದ್ದರು. ತಡರಾತ್ರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಒಂದು ದಿನ ಮಾತ್ರ ದಿನೇಶ್ ಕುಮಾರ್ ಅವರನ್ನು ಇ.ಡಿ.ವಶಕ್ಕೆ ನೀಡಿದ್ದರು. ಬುಧವಾರ ಮಧ್ಯಾಹ್ನ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಿದ್ದರು.
ಅದರಂತೆ ಬುಧವಾರ ಆರೋಪಿ ದಿನೇಶ್ ಕುಮಾರ್ ಅವರನ್ನು ಇ.ಡಿ.ಅಧಿಕಾರಿಗಳು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ೧೪ ದಿನ ವಶಕ್ಕೆ ನೀಡುವಂತೆ ಇ.ಡಿ.ಪರ ವಕೀಲರು ಮನವಿ ಮಾಡಿದರು. ಬಳಿಕ ನ್ಯಾಯಾಲಯವು ಆರೋಪಿಯನ್ನು ೯ ದಿನಗಳ ಇ.ಡಿ ವಶಕ್ಕೆ ನೀಡಿ ಆದೇಶಿಸಿತು. ಹೀಗಾಗಿ ಇ.ಡಿ.ಅಧಿಕಾರಿಗಳು ಆರೋಪಿಯ ದಿನೇಶ್ ಕುಮಾರ್ ಅವರನ್ನು ಶಾಂತಿನಗರದ ಇ.ಡಿ.ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.
ಮಧ್ಯಂತರ ಜಾಮೀನು ಅರ್ಜಿ ಸೆ.22ಕ್ಕೆ ವಿಚಾರಣೆ:
ಈ ಮಧ್ಯೆ ಆರೋಪಿ ದಿನೇಶ್ ಕುಮಾರ್ ಪರ ವಕೀಲರು, ಮಧ್ಯಂತರ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಈ ಅರ್ಜಿ ಕುರಿತ ವಿಚಾರಣೆಯನ್ನು ನ್ಯಾಯಾಲಯವು ಸೆ.೨೨ಕ್ಕೆ ಮುಂದೂಡಿ ಆದೇಶಿಸಿದೆ.
ಏನಿದು ಪ್ರಕರಣ?
ದಿನೇಶ್ ಕುಮಾರ್ ಅವರು, ೨೦೨೨ರಲ್ಲಿ ಮುಡಾ ಆಯುಕ್ತರಾಗಿದ್ದರು. ಇವರ ಅವಧಿಯಲ್ಲಿ ೫೦:೫೦ರ ಅನುಪಾತದಲ್ಲಿ ನೂರಾರು ಕೋಟಿ ರೂ. ಮೌಲ್ಯದ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪ ಕೇಳಿ ಬಂದಿತ್ತು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಕೋಟ್ಯಂತರ ರು. ಮೌಲ್ಯದ ೧೪ ಬದಲಿ ನಿವೇಶನ ಕೊಡಿಸುವಲ್ಲಿ ಪ್ರಭಾವ ಬೀರಿರುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಅಕ್ರಮ ಹಣ ವರ್ಗಾಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಇ.ಡಿ.ಅಧಿಕಾರಿಗಳು, ದಿನೇಶ್ ಕುಮಾರ್ ಅವರ ಮನೆಯ ಮೇಲೆ ದಾಳಿ ನಡೆಸಿ ಶೋಧಿಸಿದ್ದರು. ಬಳಿಕ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದ್ದರು. ನೋಟಿಸ್ ಹಿನ್ನೆಲೆಯಲ್ಲಿ ನ.೯ರಂದು ಇ.ಡಿ.ಅಧಿಕಾರಿಗಳ ಎದುರು ಹಾಜರಾಗಿದ್ದ ದಿನೇಶ್ ಕುಮಾರ್ ಅವರನ್ನು ವಿಚಾರಣೆ ನಡೆಸಿ ಮಾಹಿತಿ ಕಲೆಹಾಕಿದ್ದರು.