ಬೆಳಗಾವಿ: ಕಾರ್ಮಿಕ ಇಲಾಖೆ ವ್ಯಾಪ್ತಿಯಲ್ಲಿ ಯಾವುದೇ ಕಾನೂನು ಅಥವಾ ನಿಯಮ ಉಲ್ಲಂಘನೆಯಾದಲ್ಲಿ, ಸರಿಯಾದ ಕಾಯ್ದೆಯಡಿ ಅಧಿಕಾರಿಗಳು ಪ್ರಕರಣ ದಾಖಲಿಸಬೇಕು. ಇಂತಹ ಸಂದರ್ಭಗಳಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ಸೂಕ್ತ ಸಲಹೆ ನೀಡಲಾಗುವುದು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿಜಯ ದೇವರಾಜ ಅರಸು ತಿಳಿಸಿದರು.
ನಗರದಲ್ಲಿ ಬುಧವಾರ ಆರಂಭ ಗೊಂಡ ಎರಡು ದಿನಗಳ ಕಾರ್ಮಿಕ ಇಲಾಖೆಯ ಬೆಳಗಾವಿ ಪ್ರಾದೇಶಿಕ ಮಟ್ಟದ ಅಧಿಕಾರಿಗಳ ಹಾಗೂ ನಿರೀಕ್ಷಕರುಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕರ್ತವ್ಯದ ಜತೆಗೆ ವಿವಿಧ ತರಬೇತಿ ಗಳನ್ನೂ ಪಡೆಯಬೇಕು ಎಂದರು.
ಬಾಲಕಾರ್ಮಿಕ ಪದ್ಧತಿ ವಿರುದ್ಧ ಕಾನೂನು, ಕಾಯ್ದೆಯಡಿಯಲ್ಲಿ ಹೇಗೆ ಪ್ರಕರಣ ದಾಖಲಿಸಬೇಕು ಹಾಗೂ ಸಾಕ್ಷ್ಯಗಳನ್ನು ಸರಿಯಾದ ಮಾದರಿಯಲ್ಲಿ ಹೇಗೆ ಸಂಗ್ರಹಿಸಬೇಕು ಮತ್ತು ಆ ಸಾಕ್ಷ್ಯಕ್ಕೆ ಅನುಗುಣವಾಗಿ ಪ್ರಕರಣ ವಜಾ ಆಗದಂತೆ ದಾಖಲಿಸುವುದು ಬಹಳ ಮುಖ್ಯವಾಗಿರುತ್ತದೆ ಎಂದು ಹೇಳಿದರು.
ಉಪ ಕಾರ್ಮಿಕ ಆಯುಕ್ತ ವೆಂಕಟೇಶ ಶಿಂದಿಹಟ್ಟಿ, ಕೆ.ಜಿ. ಜಾನ್ಸನ್, ಅಧಿಕಾರಿ ಸಂಗಮೇಶ ಹಿರೇಮಠ, ವಕೀಲ ಅಶೋಕ ಹಲಗಲಿ, ಪ್ರೊ. ಶ್ರೀಕಾಂತ ಕೆ.ಎಸ್., ಕಾರ್ಮಿಕ ಅಧಿಕಾರಿ ತರನ್ನುಂ ಬೆಂಗಾಲಿ ಇದ್ದರು.