ಹುಣಸೂರು: ನಗರದ ಎಚ್.ಡಿ.ಕೋಟೆ ವೃತ್ತದ ಬಳಿ ನಗರಸಭೆ ವತಿಯಿಂದ ನೂತನವಾಗಿ ಸುಸಜ್ಜಿತ ಸಾರ್ವಜನಿಕ ಶೌಚಗೃಹ ಮತ್ತು ಸ್ನಾನಗೃಹ(ಪೇ ಆ್ಯಂಡ್ ಯೂಸ್)ನಿರ್ಮಿಸಲಾಗಿದ್ದು, ನಾಗರಿಕರ ಬಹು ವರ್ಷಗಳ ಬೇಡಿಕೆ ಈಡೇರಿಸಲು ನಗರಸಭೆ ಮೊದಲ ಹೆಜ್ಜೆಯಿಟ್ಟಿದೆ.
ಹುಣಸೂರು ನಗರಕ್ಕೆ ಪ್ರತಿದಿನ ಕನಿಷ್ಠ 10-15 ಸಾವಿರ ಜನರು ಬಂದು ಹೋಗುತ್ತಿದ್ದು, ನಗರ ವ್ಯಾಪ್ತಿಯಲ್ಲಿ ಒಂದೇ ಒಂದು ಸಾರ್ವಜನಿಕ ಶೌಚಗೃಹ ಇಲ್ಲದಿರುವ ಕುರಿತು ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಗ್ರಾಮಾಂತರ ಭಾಗದಿಂದ ಬಂದ ಜನರು ಪಾಳುಜಾಗದಲ್ಲಿ, ಕಟ್ಟಡಗಳ ಬಳಿ ಬಹಿರ್ದೆಸೆಗೆ ಹೋಗುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು.
ಸ್ವಚ್ಛ ಭಾರತ ಯೋಜನೆಯಡಿ ನಿರ್ಮಾಣ: ಇದೀಗ ಮೊದಲ ಹೆಜ್ಜೆಯಾಗಿ ನಗರಸಭೆ ಎಚ್.ಡಿ.ಕೋಟೆ ವೃತ್ತದಲ್ಲಿ 20 ಲಕ್ಷ ರೂ.ವೆಚ್ಚದಡಿ ಸುಸಜ್ಜಿತ ಶೌಚ ಮತ್ತು ಸ್ನಾನಗೃಹ ನಿರ್ಮಾಣಗೊಂಡಿದೆ. ಈ ಹಿಂದೆ ಇದೇ ಜಾಗದಲ್ಲಿದ್ದ ಶೌಚಗೃಹವನ್ನು ದುರಸ್ತಿಗೊಳಿಸಿ ಸಾರ್ವಜನಿಕ ಸೇವೆಗೆ ಇರಿಸಲಾಗಿದೆ.
ನೂತನ ಕಟ್ಟಡದಲ್ಲಿ ಸ್ವಚ್ಛ ಭಾರತ್ ಯೋಜನೆಯಡಿ ರೂಪಿಸಿರುವ ಹಲವಾರು ಮಾನದಂಡಗಳನ್ನು ಆಧರಿಸಿ ಶೌಚಗೃಹ ನಿರ್ಮಿಸಲಾಗಿದೆ. ಈ ಕಟ್ಟಡದಲ್ಲಿ ಸೋಲಾರ್ ಅಳವಡಿಸಲಾಗಿದೆ. ನಗರಸಭೆಯಿಂದ ದಿನದ 24 ಗಂಟೆಯೂ ನೀರು ಸರಬರಾಜು ವ್ಯವಸ್ಥೆ ಕೈಗೊಳ್ಳಲಾಗಿದೆ. ವಿದ್ಯುತ್ ದೀಪದ ವ್ಯವಸ್ಥೆ ಹೊಂದಿದೆ. ಕಟ್ಟಡದ ಸುತ್ತ ಲಾನ್ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಕಲ್ಲು ಬೆಂಚುಗಳನ್ನು ಅಳವಡಿಸಲಾಗಿದೆ. ಸ್ನಾನಗೃಹಕ್ಕೆ ಅಗತ್ಯ ಬಿಸಿನೀರನ್ನು ಸೋಲಾರ್ ಮೂಲಕ ಒದಗಿಸಲಾಗುತ್ತಿದೆ. ಶೌಚಗೃಹವನ್ನು ಪೌರಕಾರ್ಮಿಕರನ್ನೇ ಒಳಗೊಂಡ ಗುತ್ತಿಗೆದಾರರಿಗೆ ಗುತ್ತಿಗೆ ನೀಡಲಾಗಿದ್ದು, ಸಾರ್ವಜನಿಕರು ಹಣ ತೆತ್ತು ಶೌಚಗೃಹಗಳನ್ನು ಬಳಸಬಹುದಾಗಿದೆ.
ಸಂತೆಮಾಳದ ಶೌಚಗೃಹ ನವೀಕರಣ: ಅಂತೆಯೇ ಸಂತೆಮಾಳದಲ್ಲಿದ್ದ ಶೌಚಗೃಹವೂ ದುಸ್ಥಿತಿಯಲ್ಲಿತ್ತು. ಇದೀಗ ಅದನ್ನೂ ದುರಸ್ತಿಗೊಳಿಸಲಾಗಿದೆ. ಸುಸಜ್ಜಿತ ಕಮೋಡ್‌ಗಳು, ನಲ್ಲಿಗಳು, ಬಾಗಿಲುಗಳನ್ನು ಅಳವಡಿಸಿ ಕಟ್ಟಡದ ಸುತ್ತ ಆಕರ್ಷಕ ಪೇಯಿಂಟಿಂಗ್ಸ್ ಮಾಡಲಾಗಿದ್ದು, ಸುತ್ತಮುತ್ತಲ ಪರಿಸರ ಉತ್ತಮವಾಗಿರಿಸಲಾಗಿದೆ.
ಇನ್ನಷ್ಟು ಅವಶ್ಯಕತೆಯಿದೆ: ಹುಣಸೂರು ಉಪವಿಭಾಗ ಕೇಂದ್ರವಾಗಿದ್ದು, ಅಕ್ಕಪಕ್ಕದ ತಾಲೂಕುಗಳಾದ ಎಚ್.ಡಿ.ಕೋಟಿ, ಪಿರಿಯಾಪಟ್ಟಣ, ಕೆ.ಆರ್.ನಗರ ತಾಲೂಕುಗಳಿಂದಲೂ ಜನರು ದಿನಂಪ್ರತಿ ಸರ್ಕಾರಿ ಕೆಲಸಗಳಿಗಾಗಿ ಬರುತ್ತಾರೆ. ಅಲ್ಲದೇ ಹುಣಸೂರು ನಗರವೂ ದಿನದಿನಕ್ಕೂ ವಿಸ್ತಾರವಾಗಿ ಬೆಳೆಯುತ್ತಿದೆ. ಹುಣಸೂರು ನಗರ ಪ್ರಸ್ತುತ 60ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಪರಿಸ್ಥಿತಿ ಹೀಗಿರುವಾಗ ಹುಣಸೂರು ಬೈಪಾಸ್ ರಸ್ತೆಯಲ್ಲಿರುವ ತಾಲುಕು ಕಚೇರಿಗೆ ದಿನಕ್ಕೆ 4-5 ಸಾವಿರ ರೈತರು ಮತ್ತಿತರು ಬಂದು ಹೋಗುತ್ತಿದ್ದಾರೆ. ಇಲ್ಲಿ ಶೌಚಗೃಹವೇ ಇಲ್ಲ. ಸಾರ್ವಜನಿಕರು ಕಚೇರಿ ಕಟ್ಟಡದ ಹಿಂಭಾಗದಲ್ಲಿರುವ ಆಳೆತ್ತರದ ಮರಗಳ ಬಳಿ ತೆರಳುವ ಪರಿಸ್ಥಿತಿ ಬಂದೊದಗಿದೆ.
ಸೇತುವೆ ಹುಣಸೂರಿನಲ್ಲೂ ಒಂದೇ ಒಂದು ಶೌಚಗೃಹವಿಲ್ಲ. ಹುಣಸೂರು ನಗರದ ಮುನೇಶ್ವರ ಕಾವಲ್ ಮೈದಾನದ ಬಳಿಯೂ ಶೌಚಗೃಹದ ಅವಶ್ಯಕತೆಯಿದೆ. ನಗರಸಭೆ ವತಿಯಿಂದ ಹುಣಸೂರು ಬಸ್ ನಿಲ್ದಾಣದ ವ್ಯಾಪ್ತಿಯಲ್ಲೂ ಒಂದು ಸಾರ್ವಜನಿಕ ಶೌಚಗೃಹ ಸ್ಥಾಪನೆಯಾಬೇಕು ಎಂದು ನಿವೃತ್ತ ಪ್ರಾಂಶುಪಾಲ ಮೋದೂರು ಮಹೇಶಾರಾಧ್ಯ ಆಗ್ರಹಿಸಿದ್ದಾರೆ.
ಜನಸಾಂದ್ರತೆ, ಜನಸಂಖ್ಯೆಯನ್ನಾಧರಿಸಿ: ಸ್ವಚ್ಛ ಭಾರತ ಯೋಜನೆಯಡಿ ಬಯಲುಮುಕ್ತ ನಗರವಾಗಿ ಹುಣಸೂರು ಹೊರಹೊಮ್ಮಿದ್ದರೂ ಒಡಿಎಫ್(ಓಪನ್ ಡಿಫಿಕೇಷನ್ ಫ್ರೀ)ಯಲ್ಲಿನ ಗ್ರೇಡ್‌ಗಳನ್ನು ಪಡೆಯುವಲ್ಲಿ ಹುಣಸೂರು ವಿಫಲವಾಗಿದೆ. ಓಡಿಎಫ್‌ನಲ್ಲಿ ಕೇಂದ್ರ ಸರ್ಕಾರ ಓಡಿಎಫ್ ಪ್ಲಸ್, ಪ್ಲಸ್ ಪ್ಲಸ್ ಹೀಗೆ ಗ್ರೇಡ್‌ಗಳನ್ನು ನೀಡುತ್ತದೆ.
ನಗರದ ಜನಸಾಂದ್ರತೆ(ಡೆನ್ಸಿಟಿ ಆಫ್ ಪಾಪುಲೇಷನ್), ಜನಸಂಖ್ಯೆ, ಬಂದುಹೋಗುವವರ ಸಂಖ್ಯೆ, ವಾಣಿಜ್ಯ ಮಳಿಗೆಗಳ ವಿಸ್ತಾರ ಮತ್ತು ಸಂಖ್ಯೆಯನ್ನಾಧರಿಸಿ ನಗರದಲ್ಲಿ ಎಷ್ಟು ಸಾರ್ವಜನಿಕ ಶೌಚಗೃಹಗಳು ಇರಬೇಕೆನ್ನುವುದನ್ನು ನಿರ್ಧರಿಸಿ ಅದರಂತೆ ಸ್ಥಳೀಯ ಸಂಸ್ಥೆಗಳು ಶೌಚಗೃಹಗಳನ್ನು ನಿರ್ಮಿಸಿದಲ್ಲಿ ಹೆಚ್ಚಿನ ಮಟ್ಟದ ಗ್ರೇಡ್‌ಗಳನ್ನು ಪಡೆಯಲು ಸಾಧ್ಯ. ಹಾಗೂ ಆ ಮೂಲಕ ಜನರಿಗೆ ಸೇವೆಗಳನ್ನು ನೀಡಲು ಸಾಧ್ಯ. ಆದರೆ ನಗರವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿಗೆ ಸೋಲಾರ್ ವ್ಯವಸ್ಥೆ, ಉತ್ತಮ ಪರಿಸರ, ಸ್ನಾನಗೃಹಗಳನ್ನು ಹೊಂದಿರುವ ಮೊಟ್ಟಮೊದಲ ಶೌಚಗೃಹ ಸ್ಥಾಪನೆಯಾಗಿದೆ.
ಅಂಗೈಯಲ್ಲೇ ಹುಣ್ಣು: ನಗರಸಭೆಯೇನೋ ನಗರದಾದ್ಯಂತ ಶೌಚಗೃಹಗಳ ಸ್ಥಾಪನೆಗೆ ಮುಂದಾಗಿರುವುದು ಸ್ವಾಗತಾರ್ಹ. ಆದರೆ ನಗರಸಭೆ ಕಚೇರಿಯೊಳಗಿನ ಶೌಚಗೃಹಗಳ ಅವ್ಯವಸ್ಥೆಯನ್ನು ಕಂಡರೆ ಮನುಷ್ಯ ಕಚೇರಿಗೆ ಹೋಗದಂತಹ ಪರಿಸ್ಥಿತಿ ಇದೆ. ಶೌಚಗೃಹದ ಬಾಗಿಲು ತೆರೆದರೆ ಇಡೀ ಕಚೇರಿಯ ತುಂಬೆಲ್ಲಾ ದುರ್ವಾಸನೆ ಹರಡುತ್ತದೆ. ಪೌರಕಾರ್ಮಿಕರಿದ್ದು, ನೀರಿನ ಸೌಲಭ್ಯವಿದ್ದೂ ಪರಿಸ್ಥಿತಿ ಹೀಗೇಕೆ ಎನ್ನುವುದೇ ಅರ್ಥವಾಗುತ್ತಿಲ್ಲ. ಕಚೇರಿ ಕೆಲಸಕ್ಕಾಗಿ ಬರುವ ನಾಗರಿಕರು 31 ನಗರಸಭಾ ಸದಸ್ಯರಿಗೂ ಶಾಪ ಹಾಕುತ್ತಿದ್ದಾರೆ. ಅಂಗೈಯಲ್ಲಿ ಹುಣ್ಣು ಇದೆ. ಅದನ್ನು ಮೊದಲು ಗುಣಪಡಿಸಿ ಎನ್ನುವುದು ನಾಗರಿಕರ ಆಗ್ರಹವಾಗಿದೆ.
ಶೌಚಗೃಹ ನಿರ್ಮಾಣವಾಗಲಿದೆ: ನಗರದಲ್ಲಿ ಇನ್ನು 2-3 ಕಡೆಗಳಲ್ಲಿ ಸಾರ್ವಜನಿಕ ಶೌಚಗೃಹಗಳನ್ನು ನಿರ್ಮಿಸಲು ಜಾಗಗಳನ್ನು ಗುರುತಿಸಲಾಗಿದೆ. ಸಾರ್ವಜನಿಕ ಶೌಚಗೃಹಗಳ ನಿರ್ಮಾಣ ಮತ್ತು ನಿರ್ವಹಣೆಯ ಪರಿಕಲ್ಪನೆ ಬದಲಾಗಿದ್ದು, ನಾಗರಿಕರು ಪರಿಸರ ಅನೈರ್ಮಲ್ಯಗೊಳ್ಳುತ್ತದೆ ಎನ್ನುವ ಆತಂಕದಿಂದ ದೂರಾಗಬಹುದು. ಉತ್ತಮ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು ಜನರ ಸಹಕಾರ ಅಗತ್ಯ.
ಖಲೀಲ್ ಸಾಬ್, ಪೌರಾಯುಕ್ತ,
ನಗರಸಭೆ, ಹುಣಸೂರು