ಕಡೂರಿನಲ್ಲಿ ನೂತನ ಪ್ರವಾಸಿ ಮಂದಿರವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಭಂಡಾರಿ ಶ್ರೀನಿವಾಸ್, ಬಸವರಾಜನಾಯ್ಕ್ ಮತ್ತಿತರರಿದ್ದರು. 
ನ್ಯೂಸ್

ಸುಸಜ್ಚಿತ ಪ್ರವಾಸಿ ಮಂದಿರ ನಿರ್ಮಾಣ

ಕಡೂರು: ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ನೂತನವಾಗಿ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಪ್ರವಾಸಿ ಮಂದಿರ ಕಟ್ಟಡ ನಿರ್ವಹಣೆಗೆ ಆದ್ಯತೆ ನೀಡಬೇಕು ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಪ್ರವಾಸಿ ಮಂದಿರದ ಆವರಣದಲ್ಲಿರುವ ನೂತನ ಪ್ರವಾಸಿ ಮಂದಿರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ, ಇಲ್ಲಿನ ಆವರಣದಲ್ಲಿ ಬ್ರಿಟಿಷರ ಕಾಲದ ಪ್ರವಾಸಿ ಮಂದಿರ ಇತ್ತು. ಇದು ಶಿಥಿಲವಾಗಿದ್ದ ಹಿನ್ನೆಲೆಯಲ್ಲಿ ಇದೇ ಆವರಣದಲ್ಲಿ ನೂತನ ಪ್ರವಾಸಿ ಮಂದಿರವು ಲೋಕೋಪಯೋಗಿ ಇಲಾಖೆಯ ಮೂಲಕ ನಿರ್ಮಾಣವಾಗಿದ್ದು ಇದರಲ್ಲಿ ವಿಐಪಿ ಕೊಠಡಿಗಳು, ಬೆಡ್ ರೂಂ ಹೊಂದಿರುವ 11 ಕೊಠಡಿಗಳ ಕಟ್ಟಡವನ್ನು ಆಧುನಿಕವಾಗಿ ಸುಂದರವಾಗಿ ನಿರ್ಮಿಸಲಾಗಿದೆ. ಲೋಕೊಪಯೋಗಿ ಇಲಾಖೆಯ ಇಂಜಿನಿಯರ್‌ಗಳು ಮತ್ತು ಸಿಬ್ಬಂದಿ ಕಟ್ಟಡ ನಿರ್ವಹಣೆಗೆ ಒತ್ತು ನೀಡಬೇಕು ಎಂದು ಇಂಜಿನಿಯರ್ ಬಸವರಾಜನಾಯ್ಕ ಅವರಿಗೆ ಸೂಚಿಸಿದರು.

ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ರೈಲುಗಳ ಸಂಚಾರ ಹೆಚ್ಚಿರುವುದರಿಂದ ಜಿಲ್ಲೆಯ ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳಿಗೆ ಗಣ್ಯರು ತೆರಳುವುದರಿಂದ ಇಂತಹ ಸುಸಜ್ಜಿತ ಪ್ರವಾಸಿ ಮಂದಿರದ ಅವಶ್ಯಕತೆ ಇತ್ತು ಎಂದರು.

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಇದು ಉತ್ತಮ ಸೌಲಭ್ಯಗಳಿರುವ ಸುಸಜ್ಜಿತ ಕಟ್ಟಡವಾಗಿದೆ. ಗಣ್ಯರಿಗೆ ವಿಶ್ರಾಂತಿ ಪಡೆಯಲು ಹಾಗೂ ಸಭೆ, ಸುದ್ದಿಗೋಷ್ಠಿಗಳನ್ನು ನಡೆಸಲು, ಉತ್ತಮವಾದ ಸಭಾಂಗಣ, ಕೂರಲು ಪೀಠೋಪಕರಣಗಳ ವ್ಯವಸ್ಥೆಯನ್ನು ಇಲಾಖೆ ಮಾಡಿದ್ದು ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕು. ಪುರಸಭೆಯಿಂದ ಪ್ರವಾಸಿ ಮಂದಿರಕ್ಕೆ ಯಾವುದಾದರೂ ಕೆಲಸ ಆಗಬೇಕಿದ್ದರೆ ಮಾಡಿಸಿಕೊಡಲು ಸಿದ್ಧ ಎಂದು ಭರವಸೆ ನೀಡಿದರು.

ಪಿಡಬ್ಲುೃಡಿ ಎಇಇ ಬಸವರಾಜನಾಯ್ಕ, ರೇವಣ್ಣ, ತುರುವನಹಳ್ಳಿ ರೇಣುಕಪ್ಪ, ಕುಮಾರನಾಯ್ಕ ತಂಗಲಿ, ಇಂಜಿನಿಯರ್‌ಗಳು ಇದ್ದರು.