ನವದೆಹಲಿ: ಭಾರತದಲ್ಲಿ ಕರೊನಾ ಸೋಂಕಿನ ದೈನಿಕ ಪ್ರಕರಣಗಳಲ್ಲಿ ಇಳಿಕೆಯಾಗಿ ಸಾಂಕ್ರಾಮಿಕತೆಯ ಒಟ್ಟಾರೆ ಪರಿಸ್ಥಿತಿ ಸುಧಾರಿಸುತ್ತಿದ್ದರೂ ಚೀನಾ, ರಷ್ಯಾ, ಯುರೋಪ್ ಸಹಿತ ಹಲವು ದೇಶಗಳಲ್ಲಿ ವ್ಯಾಧಿ ಉಲ್ಬಣಿಸುತ್ತಿದೆ. ಹೀಗಾಗಿ, ಭಾರತದಲ್ಲಿ ಮೂರನೇ ಅಲೆ ಅಪ್ಪಳಿಸಲಿದೆಯೇ ಎಂಬ ಭಯದ ವಾತಾವರಣ ಉಂಟಾಗಿದೆ. ಕಳೆದೆರಡು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಕೋವಿಡ್&19ರ ಜಾಗತಿಕ ಪ್ರಕರಣ ಮತ್ತು ಸಾವಿನ ಸಂಖ್ಯೆ ಏರುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಹೇಳಿದೆ. ಜಗತ್ತಿನಾದ್ಯಂತ ಕಳೆದ ಕೆಲವು ವಾರಗಳಲ್ಲಿ ಕರೊನಾ ಸೋಂಕಿನ ಸುಮಾರು 30 ಲಕ್ಷ ಹೊಸ ಪ್ರಕರಣಗಳು ಹಾಗೂ 49,000ಕ್ಕೂ ಅಧಿಕ ಸಾವು ದಾಖಲಾಗಿವೆ. ಅವು ಅನುಕ್ರಮವಾಗಿ ಶೇಕಡ 4 ಹಾಗೂ ಶೇಕಡ 5ರಷ್ಟು ಏರಿಕೆಯಾಗಿವೆ.
ಚೀನಾದಲ್ಲಿ ಉಲ್ಬಣ: ಚೀನಾದಲ್ಲಿ ಕರೊನಾ ವೈರಸ್ ಹಾವಳಿ ವೇಗವಾಗಿ ಉಲ್ಬಣಗೊಳ್ಳುತ್ತಿದ್ದು ಅದರ ನಿಯಂತ್ರಣ ಕಾರ್ಯ ಸಂಕೀರ್ಣವಾಗುತ್ತಿದೆ ಎಂದು ಚೀನಾದ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಕೇವಲ 14 ದಿನದಲ್ಲಿ 14 ಪ್ರಾಂತ್ಯಗಳಲ್ಲಿ ಸ್ಥಳಿಯವಾಗಿ ಸೋಂಕು ಹರಡಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ (ಎನ್ಎಚ್ಸಿ) ವಕ್ತಾರ ಮೀ ೆಂಗ್ ಹೇಳಿದ್ದಾರೆ.
40 ಜಿಲ್ಲಾಧಿಕಾರಿಗಳ ಜತೆ ಪ್ರಧಾನಿ 3ಕ್ಕೆ ಸಭೆ: ದೇಶದಲ್ಲಿ ಶೇಕಡ 50ಕ್ಕಿಂತ ಕಡಿಮೆ ಲಸಿಕೆ ಹಾಕಿರುವ ಜಿಲ್ಲೆಗಳಲ್ಲಿನ ಪರಿಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ನವೆಂಬರ್ 3ರಂದು ಪರಿಶೀಲಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವರು. ಜಾರ್ಖಂಡ್, ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಮೇಘಾಲಯ ಮತ್ತು ಇತರ ಹಲವು ರಾಜ್ಯಗಳ 40ಕ್ಕೂ ಅಧಿಕ ಜಿಲ್ಲಾಧಿಕಾರಿಗಳೊಂದಿಗೆ ಪ್ರಧಾನಿ ಚರ್ಚಿಸಲಿದ್ದಾರೆ. ಆಯಾ ರಾಜ್ಯಗಳ ಮುಖ್ಯಮಂತ್ರಿಗಳೂ ಸಭೆಯಲ್ಲಿ ಇರುತ್ತಾರೆ.
ಶೇಕಡ 10 ಕಡಿಮೆ ಕೇಸ್: ಭಾರತದಲ್ಲಿ ಭಾನುವಾರ ಬೆಳಗ್ಗೆ ವರೆಗಿನ 24 ಗಂಟೆ ಅವಧಿಯಲ್ಲಿ ಕರೊನಾ ಸೋಂಕಿನ 12,830 ಹೊಸ ಕೇಸ್ಗಳು ದೃಢಪಟ್ಟಿವೆ. ಇದು ಶನಿವಾರದ್ದಕ್ಕಿಂತ ಶೇಕಡ 10ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸಕ್ರಿಯ ಪ್ರಕರಣಗಳು 1,59,272ಕ್ಕೆ ಇಳಿದಿದ್ದು 2020 ಮಾರ್ಚ್ ನಂತರದ ಕನಿಷ್ಠ ಪ್ರಕರಣವಾಗಿದೆ.
ಅಮೆರಿಕದಲ್ಲಿ 800 ವಿಮಾನ ಸಂಚಾರ ಸ್ಥಗಿತ: ಕೋವಿಡ್&19 ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಅಮೆರಿಕದಲ್ಲಿ ಜನರು ವಾರಾಂತ್ಯದ ಪ್ರವಾಸಕ್ಕೆ ಮುಗಿಬೀಳುತ್ತಿದ್ದಾರೆ. ಆದರೆ, ಅಮೆರಿಕದ ವಿವಿಧೆಡೆ ಬಿರುಗಾಳಿಯ ಕಾರಣ ವಿಮಾನಯಾನ ಸಂಸ್ಥೆಗಳ ಸಿಬ್ಬಂದಿ ವರ್ಗ ಕರ್ತವ್ಯಕ್ಕೆ ಹಾಜರಾಗದಿರುವುದರಿಂದ ಭಾನುವಾರ ಸಂಚರಿಸಬೇಕಿದ್ದ 400 ವಿಮಾನ ಸೇರಿ ವಾರಾಂತ್ಯದಲ್ಲಿ 800 ವಿಮಾನಗಳನ್ನು ರದ್ದು ಮಾಡಲಾಗಿದೆ ಎಂದು ಅಮೆರಿಕನ್ ಏರ್ಲೈನ್ಸ್ ಹೇಳಿದೆ. ಕಳೆದ ವಾರ ಸೌತ್ವೆಸ್ಟ್ ಏರ್ಲೈನ್ಸ್ ಎರಡು ಸಾವಿರ ವಿಮಾನಗಳ ಸಂಚಾರವನ್ನು ರದ್ದು ಮಾಡಿತ್ತು.
ಅಮೆರಿಕ ವೀಸಾಕ್ಕೆ ಹೆಚ್ಚಿದ ಸರದಿ: ನವೆಂಬರ್ 8ರಿಂದ ಭಾರತವೂ ಸೇರಿ ಸುಮಾರು 50 ರಾಷ್ಟ್ರಗಳ ಕೋವಿಡ್ ಲಸಿಕೆ ಪಡೆದ ಪ್ರಯಾಣಿಕರಿಗೆ ಅಮೆರಿಕ ಪ್ರವೇಶಾವಕಾಶ ಕಲ್ಪಿಸಿರುವುದರಿಂದ ವೀಸಾಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ. ದೆಹಲಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿಯಲ್ಲಿ ವೀಸಾ ಅರ್ಜಿದಾರರಿಗೆ ನೀಡುವ ಅಪಾಯಿಂಟ್ಮೆಂಟ್ ಪಡೆದುಕೊಳ್ಳಲೂ ಸರದಿಯಲ್ಲಿ ಕಾಯಬೇಕಿದೆ. ಅಂದಾಜು 30 ಲಕ್ಷ ಜನರಿಂದ ವೀಸಾಗೆ ಬೇಡಿಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಝೈಕೋವ್&ಡಿ ಲಸಿಕೆಯ ಒಂದು ಡೋಸ್ ಬೆಲೆಯನ್ನು 265 ರೂಪಾಯಿಗೆ ಇಳಿಸಲು ಝೈಡುಸ್ ಕ್ಯಾಡಿಲಾ ಒಪ್ಪಿಕೊಂಡಿದ್ದು ಶ್ರೀವೇ ಅಂತಿಮ ನಿರ್ಧರ ಹೊರಬೀಳಲಿದೆ. 3 ಡೋಸ್ ಲಸಿಕೆಗೆ 1,900 ರೂಪಾಯಿ ಎಂದು ಈ ಹಿಂದೆ ಪ್ರಕಟಿಸಿತ್ತು.