ಸಾಲಿಗ್ರಾಮ: ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡರೆ ಆರೋಗ್ಯ ಹಾಗೂ ಕುಟುಂಬ ಚೇತೋಹಾರಿಯಾಗಿ ಇರುತ್ತದೆ ಎಂದು ಎಂದು ಮೂಳೆ, ಕೀಲು ತಜ್ಞ ಸಾ. ರಾ. ಧನುಷ್ ತಿಳಿಸಿದರು. ಸಾಲಿಗ್ರಾಮದ ಬಾಹುಬಲಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಶನಿವಾರ ಹಮ್ಮಿಕೊಂಡಿದ್ದ ನವಜೀವನೋತ್ಸವ ಮತ್ತು ಸುಜ್ಞಾನ ನಿಧಿ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾವು ತಪ್ಪು ಮಾಡಿ ದೇವರ ಮೊರೆ ಹೋದರೆ ಸಾಲದು, ನಮ್ಮ ಮನಸ್ಸನ್ನು ಶುದ್ಧ ಮಾಡಿಕೊಳ್ಳಬೇಕು. ಬೇರೆಯವರಿಗೆ ಕೆಟ್ಟದ್ದನ್ನು ಮಾಡದೇ ಕಾಯಕವೇ ಕೈಲಾಸ ಎಂಬ ಆದರ್ಶವನ್ನು ರೂಢಿಸಿ ಕೊಂಡಾಗ ದೇವರು ತಾನಾಗಿಯೇ ಒಲಿಯುತ್ತಾನೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ದೇಶದ ಸತ್ಪ್ರಜೆಗಳಾಗಿ ಬಾಳುವ ಸಂಕಲ್ಪ ಮಾಡಬೇಕು. ಸಮಾಜವನ್ನು ಮತ್ತು ದೇಶವನ್ನು ಕಟ್ಟುವ ಕಾರ್ಯದಲ್ಲಿ ಒಂದಾಗಬೇಕು. ಉತ್ತಮ ಕೆಲಸವನ್ನು ಮಾಡಿ ಬೇರೆಯವರಿಗೂ ಮಾದರಿಯಾಗಬೇಕು, ಆಗ ಮಾತ್ರ ಉತ್ತಮ ವ್ಯಕ್ತಿಗಳಾಗಲು ಸಾಧ್ಯ ಎಂದರು. ಎಲ್ಲರೂ ದುಶ್ಚಟಗಳಿಂದ ದೂರವಿರಬೇಕು. ಹಾಗಿದ್ದರೆ ಮಾತ್ರ ರಾಜ್ಯ ಮತ್ತು ದೇಶ ಕಟ್ಟುವ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ ಎಂದರು.
ಸಂಸ್ಥೆಯ ಜಿಲ್ಲಾ ನಿರ್ದೇಶಕಿ ಮಮತಾ ರಾವ್ ಮಾತನಾಡಿ, ಸ್ವಸಹಾಯ ಪರಿಕಲ್ಪನೆಯ ಉದ್ದೇಶವನ್ನು ಎಲ್ಲರೂ ತಿಳಿಯಬೇಕು ಎಂದರು. ಮಹಿಳಾ ಸಂಘದಡಿ ಮಹಿಳೆಯರನ್ನು ಒಗ್ಗೂಡಿಸಿ ಮುಖ್ಯ ವಾಹಿನಿಗೆ ತರಲು ಉಚಿತ ಕಾನೂನು ಅರಿವು ಮೂಡಿಸುವುದು ನಮ್ಮ ಉದ್ದೇಶವಾಗಿದೆ. ಸಮಾಜದಲ್ಲಿ ಹೆಣ್ಣು ತಾನು ಸ್ವಾವಲಂಬಿಯಾಗಿ ಬದುಕಿ ತೋರಿಸಬಲ್ಲಳು ಎಂಬುದನ್ನು ಸಾಬೀತು ಮಾಡಬೇಕು. ಆ ಮೂಲಕ ಸದೃಢ ಸಮಾಜ ನಿರ್ಮಾಣವನ್ನು ಮಾಡುವ ಉದ್ದೇಶ ನಮ್ಮ ಸಂಸ್ಥೆಯದ್ದಾಗಿದೆ ಎಂದರು.
ಸಂಘದ ಯೋಜನಾಧಿಕಾರಿ ಉಮೇಶ್ ಪೂಜಾರಿ, ಬಾಹುಬಲಿ ಸಂಘದ ಅಧ್ಯಕ್ಷ ರಾಜೇಂದ್ರ ಪ್ರಸಾದ್, ಜಿಲ್ಲಾ ಜನಜಾಗೃತಿ ಸಮಿತಿಯ ಸದಸ್ಯರಾದ ಎಸ್.ಬಿ ಶೇಖರ್, ಬಾಲ ಮನೋಹರ್, ಎಸ್.ಆರ್ ಪ್ರಕಾಶ್, ಮಂಜುನಾಥ್, ಬೋಕನಾಥ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸದಸ್ಯರು ಭಾಗವಹಿಸಿದ್ದರು.