ಕಡೂರು ಪುರಸಭೆ ಕಚೇರಿ ಆವರಣದಲ್ಲಿ ಫುಟ್‌ಪಾತ್ ಸುಂಕ ವಸೂಲಾತಿಯ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಲಾಯಿತು. ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್ ಮತ್ತಿತರರಿದ್ದರು. 
ನ್ಯೂಸ್

ಸುಂಕ ವಸೂಲಾತಿ 17.55 ಲಕ್ಷ ರೂ.ಗೆ ಹರಾಜು

ಕಡೂರು: ಬೀದಿ ಬದಿ ವ್ಯಾಪಾರಸ್ಥರ 2025-26ನೇ ಸಾಲಿನ ಫುಟ್‌ಪಾತ್ ನೆಲಬಾಡಿಗೆಯ ವಸೂಲಾತಿ ಬಹಿರಂಗ ಹರಾಜಿನಲ್ಲಿ 17.55 ಲಕ್ಷ ರೂ. ಮೊತ್ತಕ್ಕೆ ಹರಾಜು ಆಗುವ ಮೂಲಕ ಕಳೆದ ಬಾರಿಗಿಂತ ಈ ಬಾರಿ ಪುರಸಭೆ ತನ್ನ ಆದಾಯ ಹೆಚ್ಚಿಸಿಕೊಂಡಿದೆ.

ಸೋಮವಾರ ಬೀದಿಬದಿ ವ್ಯಾಪಾರಸ್ಥರ ಸುಂಕ ವಸೂಲಾತಿಗೆ ಪ್ರತಿ ವರ್ಷದಂತೆ ಹರಾಜು ಪ್ರಕ್ರಿಯೆ ನಡೆಸಲಾಗಿದ್ದು ಈ ಬಾರಿ 11 ಬಿಡ್‌ದಾರರು ಭಾಗವಹಿಸಿದ್ದರು. ಪೈಪೋಟಿಯೊಂದಿಗೆ ಹರಾಜು ಪ್ರಕ್ರಿಯೆ ಏರಿಕೆ ಕಂಡು ಅಂತಿಮವಾಗಿ ಕಡೂರಿನ ಹಳೇ ಸಂತೆ ಮೈದಾನ ಸಮೀಪದ ಕೋಳಿ ವ್ಯಾಪಾರಿ ಕುಮಾರ್ ಎಂಬುವವರು 17.55 ಲಕ್ಷ ರೂ. ಮೊತ್ತಕ್ಕೆ ಬಿಡ್ ಪಡೆದುಕೊಂಡು 2025-26 ಸಾಲಿನ ಸುಂಕ ವಸೂಲಾತಿಯನ್ನು ತಮ್ಮದಾಗಿಸಿಕೊಂಡರು.

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ನಿಯಮಾನುಸಾರ ಹರಾಜು ಪ್ರಕ್ರಿಯೆ ನಡೆಸಲಾಗಿದೆ. ಪಟ್ಟಣದ ಸ್ವಚ್ಛತೆ ಮತ್ತು ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಅದೇ ರೀತಿ ಸುಂಕ ವಸೂಲಾತಿಯ ಹರಾಜು ಪ್ರಕ್ರಿಯೆಯಲ್ಲಿ ಪಾರದರ್ಶಕತೆಗೆ ಅವಕಾಶ ಕಲ್ಪಿಸಿ ಕಳೆದ ಸಾಲಿನಲ್ಲಿ 10.50 ಲಕ್ಷ ರೂ. ಬಿಡ್ ಪಡೆದುಕೊಂಡಿತ್ತು. ಈ ಬಾರಿ 17.55 ಲಕ್ಷ ರೂ. ಮೊತ್ತದ ಬಿಡ್ ಪಡೆದ ಹಿನ್ನೆಲೆಯಲ್ಲಿ 7 ಲಕ್ಷ ರೂ. ಹೆಚ್ಚುವರಿ ಆದಾಯ ಗಳಿಸಿದೆ. ಬಿಡ್ ಮೊತ್ತದ ಜತೆಗೆ ಶೇ.18ರಷ್ಟು ಸರ್ಕಾರದ ಜಿಎಸ್‌ಟಿ ತೆರಿಗೆ ಹಣ ಸೇರ್ಪಡೆಯಾಗಲಿದೆ. ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರು ಕೂಡ ಸ್ವಚ್ಛತೆಗೆ ಪುರಸಭೆಯೊಂದಿಗೆ ಸಹಕರಿಸಬೇಕಿದೆ ಎಂದು ಮನವಿ ಮಾಡಿದರು. ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್, ತಿಮ್ಮಯ್ಯ, ಡಿಶ್ ಮಂಜುನಾಥ್, ಜಿಮ್ ರಾಜು, ನಾಗರಾಜ್, ಕಾಂತರಾಜ್ ಹಾಗೂ ಬಿಡ್‌ದಾರರು, ಸಾರ್ವಜನಿಕರು ಇದ್ದರು.