ಮೂಡಿಗೆರೆ: ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ಕೊಟ್ಟಿಗೆಹಾರದ ಸೀತಾರಾಮ ದೇವಸ್ಥಾನಕ್ಕೆ ಬುಧವಾರ ಮಾಜಿ ಶಾಸಕ ಬೈರತಿ ಬಸವರಾಜ್ ಭೇಟಿ ನೀಡಿ ಶರನ್ನವರಾತ್ರಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಅವರನ್ನು ದೇವಸ್ಥಾನದ ಆಡಳಿತ ಸಮಿತಿ ಮುಖಂಡರು ಸನ್ಮಾನಿಸಿದರು. ಬೈರತಿ ಬಸವರಾಜ್ ಮಾತನಾಡಿ, ರಾಜ್ಯದ ಪ್ರತಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ನಡೆಯುತ್ತದೆ. ವರ್ಷಕೊಮ್ಮೆ ನಡೆಯುವ ಈ ಹಬ್ಬದಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ವಿಶೇಷ ಪೂಜೆ ಸಲ್ಲಿಸಬೇಕು. ಹಾಗಾದರೆ ಮಾತ್ರ ಹಬ್ಬಕ್ಕೆ ವಿಶೇಷ ಮೆರುಗು ನೀಡಿದಂತಾಗುತ್ತದೆ ಎಂದು ತಿಳಿಸಿದರು. ಶಾಸಕರ ಆಪ್ತರಾದ ಕಿರಣ್, ಬಿಜೆಪಿ ಮಂಡಲ ಅಧ್ಯಕ್ಷ ಟಿ.ಎಂ.ಗಜೇಂದ್ರ, ನರೇಂದ್ರಗೌಡ, ಎ.ಎಸ್.ಅಶ್ವತ್ಥ್, ಎ.ಆರ್.ಅಭಿಲಾಷ್, ಜಿ.ವೇಣುಗೋಪಾಲ್ ಪೈ, ಸಂಜಯ್ ಗೌಡ, ಟಿ.ಎಂ.ಆದರ್ಶ, ವಿಕ್ರಂಗೌಡ, ಸಂದೀಪ್ ಗೌಡ, ಗಿರೀಶ್, ಬಿ.ಎಸ್.ಕಲ್ಲೇಶ್ ಇತರರಿದ್ದರು.