ನ್ಯೂಸ್

ಸಿಸಿಬಿ ಪೊಲೀಸ್ ಸೋಗಿನಲ್ಲಿ ಯುವಕನಿಗೆ ವಂಚನೆ

ಬೆಂಗಳೂರು: ಸರ್ಕಾರಿ ನೌಕರಿ ಸಿಗುತ್ತದೆ ಎಂಬ ಆಸೆಗೆ 95 ಸಾವಿರ ರೂ. ವಂಚನೆಗೊಳಗಾಗಿದ್ದ ಯುವಕನಿಗೆ, ಆರೋಪಿಯನ್ನು ಬಂಧಿಸಿ ಹಣ ಕೊಡಿಸುವುದಾಗಿ ಸಿಸಿಬಿ ಪೊಲೀಸ್ ಅಧಿಕಾರಿ ಸೋಗಿನಲ್ಲಿ ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ 5 ಸಾವಿರ ರೂ. ಪಡೆದು ಯಾಮಾರಿಸಿದ್ದಾನೆ.

ಅತ್ತಿಗುಪ್ಪೆ ನಿವಾಸಿ ಶರತ್ ಎಂಬುವರು ಕೊಟ್ಟ ದೂರಿನ ಮೇರೆಗೆ ಆರೋಪಿ ನಾಗರಾಜ ಎಂಬಾತನ ವಿರುದ್ಧ ಅನ್ನಪೂರ್ಣೇಶ್ವರಿನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದೂರುದಾರ ಶರತ್ ವಾಹನಗಳಿಗೆ ಸಂಬಂಧಿಸಿದ ವಸ್ತುಗಳ ಮಾರಾಟದ ಅಂಗಡಿ ಇಟ್ಟುಕೊಂಡಿದ್ದಾರೆ. ವ್ಯವಹಾರಕ್ಕೆ ನೆರವಾಗುತ್ತಿದ್ದ ಸಹೋದರ ಪ್ರಸನ್ನಗೆ ಶರಣಬಸವ ಎಂಬಾತ ಪರಿಚಯವಾಗಿದ್ದ. ಈ ವೇಳೆ ಶರಣಬಸವ, ಸರ್ಕಾರಿ ನೌಕರಿ ಕೊಡಿಸುತ್ತೇನೆ. ಇದಕ್ಕೆ ಹಣ ಖರ್ಚಾಗುತ್ತದೆ. ಒಪ್ಪುವುದಾದರೆ ಪರಿಚಯಸ್ಥ ಅಧಿಕಾರಿಗಳ ಜತೆ ಮಾತನಾಡುವುದಾಗಿ ಹೇಳಿದ್ದ. ಆತನ ಮಾತನ್ನು ನಂಬಿದ್ದ ಪ್ರಸನ್ನ, 90 ಸಾವಿರ ರೂ. ಕೊಟ್ಟಿದ್ದ. ಕೆಲ ತಿಂಗಳಾದರೂ ಕೆಲಸ ಕೊಡಿಸಿರಲಿಲ್ಲ. ಅಲ್ಲದೆ, ತೆಗೆದುಕೊಂಡಿದ್ದ ಹಣ ವಾಪಸ್ ಕೊಟ್ಟಿರಲಿಲ್ಲ.

ಅಂಗಡಿಗೆ ನಾಗರಾಜ್ ಬಂದಿದ್ದಾಗ, ಶರಣಬಸವ ನೌಕರಿ ಕೊಡಿಸುವುದಾಗಿ ವಂಚಿಸಿರುವ ವಿಚಾರವನ್ನು ಪ್ರಸನ್ನ ತಿಳಿಸಿದ್ದ. ಈ ವೇಳೆ ನಾಗರಾಜ್, ತಾನು ಸಿಸಿಬಿ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡಿದ್ದ. ಮುದ್ದಿನಪಾಳ್ಯ ಮುಖ್ಯರಸ್ತೆಯಲ್ಲಿ ಎನ್‌ಸಿಆರ್‌ಬಿ ಕಚೇರಿ ಇದೆ. ಅಲ್ಲಿಗೆ ಬಂದು ಭೇಟಿಯಾಗು, ಸಮಸ್ಯೆ ಬಗೆಹರಿಸುತ್ತೇನೆ ಎಂದಿದ್ದ. ಹೀಗಾಗಿ ಸಹೋದರರಿಬ್ಬರು ಸೆ.10ರಂದು ಆತನ ಕಚೇರಿಗೆ ಹೋಗಿ ನಾಗರಾಜ್‌ನನ್ನು ಭೇಟಿಯಾಗಿದ್ದರು. ಇದೇ ವೇಳೆ ಆನ್‌ಲೈನ್ ಬ್ಯಾಂಕಿಂಗ್ ಮೂಲಕ 5 ಸಾವಿರ ರೂ. ವರ್ಗಾವಣೆ ಮಾಡಿದ್ದರು.
ಶೀಘ್ರದಲ್ಲೇ ಆರೋಪಿಯನ್ನು ಹಿಡಿದು, ಹಣ ವಸೂಲಿ ಮಾಡಿಸಿಕೊಡುವುದಾಗಿ ನಂಬಿಸಿದ್ದ. ಇದಾದ 15 ದಿನ ಕಳೆದರೂ ಕೆಲಸ ಮಾಡಿಕೊಟ್ಟಿರಲಿಲ್ಲ. ಕರೆ ಮಾಡಿ ವಿಚಾರಿಸಿದಾಗಲೆಲ್ಲ ಸಬೂಬು ಹೇಳುತ್ತಿದ್ದ. ಸೆ.26ರಂದು ಆತನ ಕಚೇರಿ ಬಳಿ ಹೋಗಿ ಜನರನ್ನು ವಿಚಾರಿಸಿದಾಗ, ನಾಗರಾಜ್ ಸಿಸಿಬಿ ಪೊಲೀಸ್ ಅಧಿಕಾರಿಯೆಂದು ಹೇಳಿಕೊಂಡು ಹಲವರಿಂದ ಹಣ ವಸೂಲಿ ಮಾಡಿ ವಂಚಿಸಿದ್ದಾನೆ ಎಂಬುದು ಗೊತ್ತಾಗಿದೆ. ಬಳಿಕ ಆರೋಪಿ ವಿರುದ್ಧ ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.