ನ್ಯೂಸ್

ಸಿಲಿಕಾನ್ ಸಿಟಿಯಲ್ಲಿ ಶವಗಳ ಅಕ್ರಮ ಸಾಗಾಟ ದಂಧೆ ?

ಬೆಂಗಳೂರು : ಜನ ವಸತಿ ಪ್ರದೇಶದಲ್ಲಿ ಕಾನೂನು ಉಲ್ಲೇಸಿ ಶವವನ್ನು ಪ್ಯಾಂಕಿಂಗ್ ಮಾಡಿ ಸಾಗಿಸುತ್ತಿರುವ ಬಗ್ಗೆ ಹೆಣ್ಣೂರು ಪೊಲೀಸ್ ಠಾಣೆಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ದೂರು ನೀಡಿದ್ದಾರೆ. ಹೆಣ್ಣೂರು ಕ್ರಾಸ್ ಸಮೀಪದ ಬಾಟ ಮಾರಾಟ ಮಳಿಗೆ ಪಕ್ಕದ ರಸ್ತೆಯಲ್ಲಿರುವ ಗೊದಾಮಿನಲ್ಲಿ ಕೆಲವರು ಮೃತದೇಹಗಳನ್ನು ತಂದು ಬೇರೆಡೆಗೆ ಅಕ್ರಮವಾಗಿ ಸಾಗಾಟ ಮಾಡುವ ದಂಧೆ ನಡೆಸುತ್ತಿದ್ದಾರೆ. ಈ ಕುರಿತು ಜಾಗದ ಮಾಲೀಕರನ್ನು ವಿಚಾರಿಸಿದಾಗ ಆಸ್ಪತ್ರೆಯಿಂದ ಶವಗಳನ್ನು ತಂದು ಪ್ಯಾಂಕಿಂಗ್ ಮಾಡಿ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಗುತ್ತದೆ ಎಂದಿದ್ದಾರೆ.

ಜನ ವಸತಿ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಶವಗಳನ್ನು ಸಾಗಾಣಿಕೆ ದಂಧೆ ನಡೆಸುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಕರವೇ ಮುಖಂಡರು ಆಗ್ರಹಿಸಿದ್ದಾರೆ.

ಯಲಹಂಕದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಣಿಪುರ ಮೂಲದ ವ್ಯಕ್ತಿ ಮೃತಪಟ್ಟಿದ್ದ. ಶವವನ್ನು ಪಾಲಕರಿಗೆ ಬುಧವಾರ ಪೊಲೀಸರು ಹಸ್ತಾಂತರಿಸಿದ್ದರು. ವಿಮಾನ ನಿಲ್ದಾಣಕ್ಕೆ ಸಾಗಿಸಲು ಹೆಣ್ಣೂರು ಕ್ರಾಸ್ ಬಳಿಗೆ ಶವ ತಂದಾಗ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮೃತ ವ್ಯಕ್ತಿ ಕುಟುಂಬದ ವಕೀಲರಿಗೆ ಹಾಗೂ ಕರವೇ ಕಾರ್ಯಕರ್ತರಿಗೆ ದಾಖಲೆಗಳ ಸಮೇತ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ ಎಂದು ಹೆಣ್ಣೂರು ಪೊಲೀಸರು ತಿಳಿಸಿದ್ದಾರೆ.