ನ್ಯೂಸ್

ಸಿನಿಮಾ ಮಾಧ್ಯಮ ಶಿಕ್ಷಣದ ಬಹುಮುಖ್ಯ ಅಂಗ ಆಗಬೇಕು /ಪ್ರೊ.ನಿರಂಜನ ವಾನಳ್ಳಿ

ವಿಜಯವಾಣಿ ಸುದ್ದಿಜಾಲ ಕೋಲಾರ

ಕಲೆಗೆ ಎಲ್ಲಿಯವರೆವಿಗೆ ಅಭಿವ್ಯಕ್ತಿ ಸ್ವಾತಂತ್ರö್ಯ ಇರುತ್ತದೆಯೋ ಅಲ್ಲಿಯವರೆವಿಗೂ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕಮರ್ಷಿಯಲ್ ಸಿನಿಮಾ ಸೋಲಬಹುದು. ಆದರೆ ಕಲಾ ಸಿನಿಮಾಗಳು ಸೋಲುವುದಿಲ್ಲ ಎಂದು ನಟಿ, ನಿರ್ಮಾಪಕಿ ಜಯಮಾಲ ತಿಳಿಸಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಆಶ್ರಯದಲ್ಲಿ ತಾಲ್ಲೂಕಿನ ಮಂಗಸAದ್ರದ ಸ್ನಾತಕೋತ್ತರ ಕೇಂದ್ರದಲ್ಲಿ ಬುಧವಾರ "ಕನ್ನಡದಲ್ಲಿ ಹೊಸ ಅಲೆ ಸಿನಿಮಾ-೫೦" ಎರಡು ದಿನಗಳ ಅಂತರಾಷ್ಟಿçÃಯ ವಿಚಾರ ಸಂಕೀರ್ಣಕ್ಕೆ ಚಾಲನೆ ನೀಡಿ ಮಾತನಾಡಿದರು.

'ಪ್ರತಿ ವ್ಯಕ್ತಿಗೆ ಕಲೆಯ ಸಹವಾಸ ಬೇಕೇ ಬೇಕು. ಅದಿಲ್ಲದೆ ಬದುಕಲು ಸಾಧ್ಯವಿಲ್ಲ. ಇದು ವಿಶ್ವವಿದ್ಯಾಲಯಗಳಿಂದಲೇ ಶುರುವಾಗಬೇಕು. ಸಿನಿಮಾವನ್ನು ಅಧ್ಯಯನದ ಭಾಗವಾಗಿಸಿಕೊಂಡು ಸಾಂಸ್ಕೃತಿಕ ಲೋಕವನ್ನು ಗೌರವಿಸಬೇಕು' ಎಂದರು.

'ಚಿತ್ರರAಗದಲ್ಲಿ ಒಂದಲ್ಲ ಒಂದು ಪ್ರಯೋಗ ನಡೆಯುತ್ತಲೇ ಬಂದಿದೆ. ಮನರಂಜನೆ ಜೊತೆಗೆ ಮನೋವಿಕಾಸಕ್ಕೂ ಹೊಸ ಅಲೆಯ ಚಿತ್ರಗಳು ತೆರೆದುಕೊಂಡವು. ಸಂಸ್ಕಾರ ಮೊಟ್ಟ ಮೊದಲ ಹೊಸ ಅಲೆಯ ಚಿತ್ರ. ಮೊಟ್ಟಮೊದಲ ಸ್ವರ್ಣ ಕಮಲ ಪ್ರಶಸ್ತಿ ದೊರಕಿಸಿಕೊಟ್ಟ ಸಿನಿಮಾ ಕೂಡ' ಎಂದು ನುಡಿದರು.

ನಿರ್ದೇಶಕ ಗಿರೀಶ ಕಾಸರವಳ್ಳಿ ಮಾತನಾಡಿ, 'ಹೊಸ ಅಲೆಗೂ ಮೊದಲಿನ ಸಿನಿಮಾಗಳು ಪ್ರೇಕ್ಷಕರ ಮೇಲೆ ಭಾವನಾತ್ಮಕ ಪರಿಣಾಮ ಬೀರುತಿದ್ದವು. ಒಂದು ಒಳ್ಳೆಯ ಸಿನಿಮಾ ಕೇವಲ ಭಾವನಾತ್ಮಕವಾಗಿರುವುದಿಲ್ಲ; ವಿಚಾರ ಪ್ರಚೋದಕವಾಗಿರುತ್ತವೆ. ಹೊಸ ಅಲೆ ಸಿನಿಮಾಗಳು ಅದರಲ್ಲಿ ಯಶ ಕಂಡವು' ಎಂದರು.

'೬೦ರ ದಶಕ ಜಾಗತಿಕ ಸಿನಿಮಾ ಕ್ರಾಂತಿಗೆ ಕಾರಣವಾಯಿತು. ಹೊಸ ಚಿಂತನೆ ಹುಟ್ಟು ಹಾಕಿತು. ಕನ್ನಡದ ಹೊಸ ಅಲೆಯ ಸಿನಿಮಾಗಳು ಎಲ್ಲಾ ರೀತಿಯಲ್ಲೂ ವಿಭಿನ್ನವಾಗಿದ್ದವು. ಸಾಮಾಜಿಕ ಚಿಂತನೆ ಅದರಲ್ಲಿತ್ತು. ಸಂಸ್ಕಾರ ಬ್ರಾಹ್ಮಣರ ಕಥೆ ಅಲ್ಲ. ಚೋಮನ ದುಡಿ ಬರೀ ಚೋಮನ ಕಥೆ ಅಲ್ಲ' ಎಂದರು.

'೧೯೭೧ರಿಂದ ೧೯೮೦ರ ಅವಧಿಯಲ್ಲಿ ಕನ್ನಡಕ್ಕೆ ಮೂರು ಸ್ವರ್ಣಕಮಲ ಪ್ರಶಸ್ತಿ ಬಂತು. ಸಂಸ್ಕಾರ, ಚೋಮನದುಡಿ, ಘಟಶ್ರಾದ್ಧಗೆ ಆ ಗೌರವ ಒಲಿಯಿತು. ಹೀಗಾಗಿ, ಭಾರತದ ಸಿನಿಮಾ ಭವಿಷ್ಯ ಕನ್ನಡ ಸಿನಿಮಾ ರಂಗದಲ್ಲಿದೆ ಎಂಬುದಾಗಿ ಅಂದು ಸತ್ಯಜಿತ್ ರೇ ಹೇಳಿದ್ದರು. ದುರದೃಷ್ಟಕರ ವಿಚಾರವೆಂದರೆ ಸತ್ಯಜಿತ್ ಮಾತು ಸುಳ್ಳಾಯಿತು. ಕನ್ನಡ ಸಿನಿಮಾಗೆ ಸೋಲಾಗಿದೆ ಎಂದು ನಾನು ಹೇಳಲ್ಲ. ಆದರೆ, ಅಗೋಚರವಾಗಿದೆ. ಪ್ರದರ್ಶನ ಅವಕಾಶದ ಕೊರತೆ ಹೆಚ್ಚಾಗಿದೆ' ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಮಾತನಾಡಿ, ಸಿನಿಮಾವು ಪತ್ರಿಕೋದ್ಯಮ ಕೋರ್ಸ್ನ ಭಾಗವಾಗಿದೆ.ಆದರೆ, ಸಂಪೂರ್ಣವಾದ ಕೋರ್ಸ್ ಇಲ್ಲ. ೧೫ ದಿನಗಳಿಗೊಮ್ಮೆ ಕನ್ನಡ ಸಿನಿಮಾ ನೋಡಿ ಚರ್ಚೆ ಮಾಡೋಣ. ಈ ಮೂಲಕ ಸಂಸ್ಕೃತಿ ಬೆಳೆಯಲಿದೆ' ಎಂದರು.

'ಜಯಮಾಲಾ ಅವರು ಸಿನಿಮಾಕ್ಕೆ ಬಂದು ೫೦ ವರ್ಷಗಳಾಗಿದೆ. ಆ ಸಂಭ್ರಮ ಆಚರಿಸೋಣ. ಸಿನಿಮಾ ಮಾಧ್ಯಮ ಶಿಕ್ಷಣದ ಬಹುಮುಖ್ಯ ಅಂಗ ಆಗಬೇಕು' ಎಂದು ಆಶಿಸಿದರು.

ಪತ್ರಕರ್ತ ಚ.ಹ.ರಘುನಾಥ್ ಮಾತನಾಡಿ, 'ಹೊಸ ಅಲೆಯ ಸಿನಿಮಾದ ಬೆಳವಣಿಗೆಯಲ್ಲಿ ರಾಜಕೀಯ, ಸಾಮಾಜಿಕ ಕ್ಷೇತ್ರದ ಪಾತ್ರವೂ ಇದೆ. ೬೦ ದಶಕದಲ್ಲಿ ಪ್ರವಾಹ ನಿಧಿಯ ಸಂಗ್ರಹ ಬಳಿಕ ಸಿನಿಮಾ ಕಲಾವಿದರು ಪ್ರೇಕ್ಷಕರಿಗೆ ಹತ್ತಿರವಾದರು. ಡಬ್ಬಿಂಗ್ ವಿರೋಧಿ ಚಳವಳಿ ಕೂಡ ಕನ್ನಡ ಹೊಸ ಬಗೆಯ ಸಿನಿಮಾಗಳ ಪುನರುತ್ಥಾನಕ್ಕೆ ಕಾರಣವಾಯಿತು' ಎಂದರು.

'ಕನ್ನಡ ಚಿಂತನೆ, ಕನ್ನಡ ವಿವೇಕ ಹಾಗೂ ಕನ್ನಡ ಸಂವೇದನೆ ರೂಪಿಸುವಲ್ಲಿ ಗಿರೀಶ್ ಕಾಸರವಳ್ಳಿ ಸಿನಿಮಾಗಳು ಪ್ರಮುಖ ಪಾತ್ರ ವಹಿಸಿವೆ. ವರ್ತಮಾನ ಕಟ್ಟಿ ಕನ್ನಡ ಸಮುದಾಯ ಅರ್ಥ ಮಾಡಿಸಿದ್ದಾರೆ. ದಾರ್ಶನಿಕ ಶಕ್ತಿ ಅವರ ಸಿನಿಮಾದಲ್ಲಿದೆ' ಎಂದು ಪ್ರತಿಪಾದಿಸಿದರು.

ಕುಲಸಚಿವ ಪ್ರೊ.ಡಿ.ಡೊಮಿನಿಕ್ ಹಾಗೂ ನಿರ್ದೇಶಕಿ ಡಿ.ಕುಮುದಾ, ನಾ ಮುನಿರಾಜು, ಕೆ.ವಿ.ನೇತ್ರಾವತಿ, ಗಾಯಿತ್ರಿ ದೇವಿ ಇದ್ದರು.

ಚಿತ್ರ ೧೨ ಕೆ.ಎಲ್.ಆರ್. ೦೨ : ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಆಯೋಜಿಸಿದ್ದ ಸಿನಿಮೊತ್ಸವದಲ್ಲಿ ನಟಿ ಜಯಮಾಲ, ನಿರ್ದೇಶಕ ಗಿರೀಶ್ ಕಾಸರವಳ್ಳಿ, ಪತ್ರಕರ್ತ ಚ.ಅ.ರಘುನಾಥ ಇವರನ್ನು ಪ್ರೋ.ನಿರಂಜನ ಅವರಿಗೆ ಸನ್ಮಾನಿಸುತ್ತಿರುವುದು.