ನ್ಯೂಸ್

ಸಿದ್ಧೇಶ್ವರ ಶ್ರೀ ಜ್ಞಾನ ವೈರಾಗ್ಯಗಳ ಬಯಲ ಬೆಳಕು

ನಂಜನಗೂಡು: ವಿಶ್ವಪ್ರಜ್ಞೆಯ ವಿರಾಟ ದರ್ಶನ ಪಡೆದ ಸಂತ ಶ್ರೇಷ್ಠ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರು ಜ್ಞಾನ ವೈರಾಗ್ಯಗಳ ಬಯಲ ಬೆಳಕು ಎಂದು ಆಧ್ಯಾತ್ಮ ಚಿಂತಕ ಶಂಕರ್ ದೇವನೂರು ಬಣ್ಣಿಸಿದರು.
ನಗರದ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿರುವ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಮಹಾಮನೆಯಲ್ಲಿ 14ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಶನಿವಾರ ಆಯೋಜಿಸಿದ್ದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರಿಗೆ ಧ್ಯಾನಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಸಿದ್ಧೇಶ್ವರ ಶ್ರೀಗಳ ಮಾತುಗಳು ಜ್ಯೋತಿರ್ಲಿಂಗ ಸ್ವರೂಪ. ಅವರ ಮಾತುಗಳು ಯಾರಿಗೆ ಸ್ಪರ್ಶ ಮಾಡುತ್ತವೆಯೋ ಅವರ ಬದುಕಲ್ಲಿ ಬೆಳಕು ಮೂಡಿದೆ. ತಮ್ಮ ವೈಯಕ್ತಿಕ ಬದುಕನ್ನು ಪರರ ಮನೋವಿಕಾಸಕ್ಕಾಗಿ ಸಮರ್ಪಿಸಿಕೊಂಡ ಮಹಾತ್ಮರು. ಅವರದ್ದು ಕೊರಳ ಧ್ವನಿಯಾಗಿರಲಿಲ್ಲ, ಕರುಳ ಧ್ವನಿಯಾಗಿತ್ತು. ಹೂವಿನಂತೆ ಬದುಕಿಗೆ, ಜಗತ್ತಿಗೆ ಪರಿಮಳವನ್ನು ಹರಿಡಿದ್ದಾರೆ. ಕರ್ಪೂರದಂತೆ, ಕಂದಲಿನಂತೆ ಅವರ ದೇಹ ಕರಗಿದೆ. ಅವರ ದಾರ್ಶನಿಕ ಚಿಂತನೆ ನಾಡಿನೆಲ್ಲೆಡೆ ಪಸರಿಸಿದೆ. ಹಾಗಾಗಿಯೇ ಅವರ ಜೀವನ ಪ್ರದರ್ಶನವಾಗದೆ ನಿದರ್ಶನವಾಗಿದೆ. ಸತ್ತು ಬದುಕುವವರ ಸಾಲಿನಲ್ಲಿ ಸಿದ್ಧೇಶ್ವರರಿದ್ದಾರೆ ಎಂದು ಸ್ಮರಿಸಿದರು.


ಹಸಿದವರ ಮುಂದೆ ಅನ್ನ ಇಡಬೇಕು. ಪಾಕಶಾಸ್ತ್ರದ ಪುಸ್ತಕವನ್ನಲ್ಲ ಎನ್ನುವುದು ಸಿದ್ಧೇಶ್ವರರ ನಿಲುವಾಗಿತ್ತು. ಕಣ್ಣು ತೆರೆದರೆ ಸಾಲದು ನೋಡಬೇಕು, ಕಿವಿ ತೆರೆದರೆ ಸಾಲದು ಕೇಳಿಸಿಕೊಳ್ಳಬೇಕು ಎಂಬುದು ಅವರ ದಿವ್ಯವಾಣಿಯಾಗಿತ್ತು. ಪ್ರಾಣಿ ಪಕ್ಷಿ, ನದಿ, ಬೆಟ್ಟ ಗುಡ್ಡಗಳಿಗೂ ಮನಸ್ಸಿದೆ ಎಂಬುದನ್ನು ಸೂಕ್ಷ್ಮವಾಗಿ ಗ್ರಹಿಸಿದ್ದರು. ಜನಸಮುದಾಯದ ಮನಸ್ಸುಗಳನ್ನು ಪೋಣಿಸುವುದೆ ನಿಜ ಸಂಸ್ಕೃತಿ ಎಂದು ಪ್ರತಿಪಾಸಿದರು. ಆಸೆಯನ್ನೇ ದಾಸವನ್ನಾಗಿ ಬದುಕಿ ಇಡೀ ಜಗತ್ತೇ ಅವರಿಗೆ ದಾಸರಾಗುವಂತೆ ಮಾಡಿದ್ದಕ್ಕೆ ಅವರ ಅಂತಿಮ ದರ್ಶನಕ್ಕೆ ಲಕ್ಷೋಪಾದಿಯಾಗಿ ಸೇರಿದ್ದ ಜನಸ್ತೋಮವೇ ಸಾಕ್ಷಿ ಎಂದರು.


ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ವಲಯ ಪ್ರಮುಖ ಡಾ.ವಿ.ರಂಗನಾಥ್ ಮಾತನಾಡಿ, ಸಿದ್ಧೇಶ್ವರರು ಇಚ್ಛಾಮರಣಿಯಾಗಿದ್ದರು. ಹಾಗಾಗಿಯೇ ಅವರು ಆಸ್ಪತ್ರೆಗೆ ಹೋಗಲಿಲ್ಲ. ನಮ್ಮ ನಡವಳಿಕೆಯಲ್ಲಿ ಸಾತ್ವಿಕ ಹಾಗೂ ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಅವರಿಗೆ ನಮನ ಸಲ್ಲಿಸಲು ನಾವೆಲ್ಲರೂ ಸಂಕಲ್ಪ ತೊಡೋಣ ಎಂದು ಹೇಳಿದರು.


ಚುಂಚನಹಳ್ಳಿ ಹಾಗೂ ನವಿಲೂರು ಮಠದ ಪೀಠಾಧ್ಯಕ್ಷ ಚನ್ನಬಸವ ಸ್ವಾಮೀಜಿ ಮಾತನಾಡಿ, ಪ್ರಕೃತಿಯನ್ನೇ ಆರಾಧಿಸುತ್ತಿದ್ದ ಸಿದ್ಧೇಶ್ವರರು ನಿಸರ್ಗದೊಂದಿಗೆ ಮೌನವಾಗಿ ಮಾತುಕತೆ ನಡೆಸುತ್ತಿದ್ದನ್ನು ಅವರ ಒಡನಾಟದಲ್ಲಿ ಕಂಡಿದ್ದೇನೆ. ಯಾರಿಗೂ ನೋವುಂಟು ಮಾಡದ ಸರಳ ಹಾಗೂ ಸಹಜ ಜೀವನವನ್ನು ಕಂಡು ನಮ್ಮೆಲ್ಲರಿಗೂ ಆದರ್ಶವನ್ನು ಬಿಟ್ಟು ಹೋಗಿದ್ದಾರೆ. ಕೈ, ಬಾಯಿ, ಮನಸ್ಸು ಶುದ್ಧವಾಗಿದ್ದರೆ ಜಗತ್ತೇ ಸುಂದರಮಯವಾಗಿರುತ್ತದೆ ಎಂಬ ಸರಳ ತತ್ವವನ್ನು ಜಗತ್ತಿಗೆ ಸಾರಿದ ಮಹಾನ್ ಸಂತರು ಎಂದು ಹೇಳಿದರು.


ಪ್ರಧಾನ ಯೋಗ ಶಿಕ್ಷಕ ಪ್ರಕಾಶ್ ಜಿ.ಉಡಿಗಾಲ ಮಾರ್ಗದರ್ಶನದಲ್ಲಿ ಸಾಮೂಹಿಕವಾಗಿ ಓಂಕಾರ ಧ್ಯಾನ, ಜ್ಯೋತಿರ್ ಧ್ಯಾನ ಮಾಡುವ ಮೂಲಕ ಸಿದ್ಧೇಶ್ವರ ಶ್ರೀಗಳಿಗೆ ಧ್ಯಾನಾರ್ಪಣೆ ಮಾಡಲಾಯಿತು. ಯೋಗ ಬಂಧುಗಳು ಗೀತಾರ್ಪಣೆ ಮೂಲಕ ಸ್ಮರಿಸಿದರು. ಕಾರ್ಯಕ್ರಮದಲ್ಲಿ 10 ಸರ್ಕಾರಿ ಶಾಲೆಯಿಂದ 50 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಆರ್.ವಿ.ರೇವಣ್ಣ, ಕಾರ್ಯದರ್ಶಿ ಎನ್.ಆರ್.ಗಣೇಶ್‌ಮೂರ್ತಿ, ನಂಜನಗೂಡು ಯೋಗ ಫೌಂಡೇಷನ್ ಅಧ್ಯಕ್ಷ ಡಿಗ್ಗೇನಹಳ್ಳಿ ಪ್ರಕಾಶ್ ಉಪಸ್ಥಿತರಿದ್ದರು.

ಅಂತರಂಗದ ಬೆಳಕುಜಗದ ಕುಲುಮೆಯನ್ನು ಸುಂದರಗೊಳಿಸಿ ಬಹಿರ್ಮುಖ ಸಮಾಜವನ್ನು ಸುಂದರ ತೋಟವನ್ನಾಗಿ ಮಾಡಿದ ಸಿದ್ಧೇಶ್ವರರು ಅಂತರಂಗದ ಬೆಳಕು. ಅನಾರೋಗ್ಯ, ದುಃಖದ ಬಗ್ಗೆ ಸದಾ ಮಾತನಾಡುತ್ತಿದ್ದರೆ ಅವುಗಳು ನಮ್ಮನ್ನು ಹೆಚ್ಚು ಪ್ರೀತಿಸುತ್ತವೆ. ಹಾಗಾಗಿ ಸದಾ ಸತ್ಚಿಂತನೆಗಳ ಕಡೆಗೆ ಎಲ್ಲರ ಚಿತ್ತ ಹರಿಯಲಿ. ಎಲ್ಲರ ಮನದಲ್ಲಿ ಬೆಳಕು ಮೂಡಲಿ ಎಂಬುದು ಅವರ ವಿಶ್ವಪ್ರಜ್ಞೆಯಾಗಿತ್ತು. ನನ್ನ ದೇಹದ ಬೂದಿಯನ್ನು ನದಿಯಲ್ಲಿ ತೇಲಿಬಿಡಿ ಅದು ಮೀನುಗಳ ಬಾಯಿಗೆ ಬಿದ್ದರೆ ಧನ್ಯವಾಯಿತು ಹುಟ್ಟು ಸಾವಿನಲಿ ಎನ್ನುವ ದಿನಕರ ದೇಸಾಯಿ ಅವರ ಕವಿತೆಯಂತೆ ಸಿದ್ಧೇಶ್ವರರು ಸಾರ್ಥಕತೆಯ ಸಾವನ್ನು ಕಂಡಿದ್ದಾರೆ.ಶಂಕರ್ ದೇವನೂರು, ಆಧ್ಯಾತ್ಮಿಕ ಚಿಂತಕ