ಪಾಂಡವಪುರ: ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಡಿ.16ರಂದು ಬಿಜೆಪಿ ಆಯೋಜಿಸಿರುವ ಜನಸಂಕಲ್ಪ ಯಾತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಿಎಂ ಆಗಮನದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಸಿದ್ಧತೆಗಳ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಒಂದಿಗೆ ಚರ್ಚಿಸಿ ಅಗತ್ಯ ಮಾಹಿತಿ ಪಡೆದರು. ಯಾತ್ರೆ ಆಗಮನ ಮತ್ತು ನಿರ್ಗಮನದ ಮಾರ್ಗಗಳ ಬಗ್ಗೆ ಸ್ಥಳೀಯ ಮುಖಂಡರಿಂದ ವಿವರಗಳನ್ನು ಪಡೆದುಕೊಂಡರಲ್ಲದೆ, ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಸಲಹೆ ಹಾಗೂ ಸೂಚನೆ ನೀಡಿದರು.
2023ರ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಬಲವರ್ಧನೆಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಎರಡು ತಂಡಗಳು ಜನಸಂಕಲ್ಪ ಯಾತ್ರೆ ಮೂಲಕ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತೆರಳುತ್ತಿವೆ. ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಜನಸಂಪರ್ಕ ಯಾತ್ರೆ ಯಶಸ್ವಿಯಾಗಿದ್ದು, ಡಿ.30ಕ್ಕೆ ಅಧಿವೇಶನ ಮುಗಿದ ಬಳಿಕವೂ ಯಾತ್ರೆ ಮುಂದುವರಿಯಲಿದೆ ಎಂದು ಗೋಪಾಲಯ್ಯ ತಿಳಿಸಿದರು.
ಕೇಂದ್ರ ಸರ್ಕಾರ ಕಬ್ಬಿನ ಬೆಲೆ ನಿಗದಿ ಮಾಡುತ್ತದೆ. ಈ ದರವನ್ನು ಕೇವಲ ಜಿಲ್ಲೆ ಮತ್ತು ರಾಜ್ಯಕ್ಕೆ ನಿಗದಿ ಮಾಡಲು ಸಾಧ್ಯವಿಲ್ಲ. ಕೇಂದ್ರ ದರ ನಿಗದಿ ಮಾಡಿದರೆ ದೇಶಕ್ಕೆ ಅನ್ವಯಿಸುತ್ತದೆ. ಕಬ್ಬಿನ ದರ ನಿಗದಿ ಸಂಬಂಧಿಧ ಇಲ್ಲಿನ ರೈತರು ಕಳೆದ 30 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಬಿಜೆಪಿ ಕ್ಷೇತ್ರಾದ್ಯಕ್ಷ ಎಲ್.ಅಶೋಕ್. ಕಾರ್ಯದರ್ಶಿ ಕೆನ್ನಾಳು ಕಾಂತರಾಜು, ಮುಖಂಡರಾದ ಡಾ.ಇಂದ್ರೇಶ್, ಎನ್.ಭಾಸ್ಕರ್, ಎಚ್.ಎನ್.ಮಂಜುನಾಥ್, ಚಿಕ್ಕಮರಳಿ ನವೀನ್, ಬಳಘಟ್ಟ ಅಶೋಕ್, ರಾಜೀವ್ ತಮ್ಮಣ್ಣ ಇತರರು ಇದ್ದರು.