ಎನ್.ಆರ್.ಪುರ ತಾಲೂಕು ಕೂಸ್ಗಲ್‌ನಲ್ಲಿ ರಂಗನಾಥಸ್ವಾಮಿ ದೇವಸ್ಥಾನದ ಸಮಿತಿ ಹಾಗೂ ಗ್ರಾಮಸ್ಥರು ಸಮೀಪದ ಗಿರಿ ಪ್ರದೇಶದಲ್ಲಿನ ಸಿದ್ದೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. 
ನ್ಯೂಸ್

ಸಿದ್ದೇಶ್ವರಸ್ವಾಮಿಗೆ ಗ್ರಾಮಸ್ಥರಿಂದ ಪೂಜೆ

ಎನ್.ಆರ್.ಪುರ: ಹೊನ್ನೇಕೊಡಿಗೆ ಗ್ರಾಪಂ ಸಾರ್ಯ ಗ್ರಾಮದ ಕೂಸ್ಗಲ್‌ನಲ್ಲಿ ಸಂಪ್ರದಾಯದಂತೆ ದೀಪಾವಳಿಯ ಮರು ದಿನ ಭಾನುವಾರ ರಂಗನಾಥಸ್ವಾಮಿ ದೇವಸ್ಥಾನದ ಸಮಿತಿ ಹಾಗೂ ಗ್ರಾಮಸ್ಥರು ಸಮೀಪದ ಗಿರಿ ಪ್ರದೇಶದಲ್ಲಿನ ಸಿದ್ದೇಶ್ವರಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದರು.

ಕೂಸ್ಗಲ್ ರಂಗನಾಥಸ್ವಾಮಿ, ಚೆನ್ನಮ್ಮದೇವಿ ದೇವಸ್ಥಾನಕ್ಕೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ದೇವಸ್ಥಾನದ ಸಮಿತಿಯವರು, ಗ್ರಾಮಸ್ಥರು ಪೂಜೆ ಸಲ್ಲಿಸಿದ್ದಾರೆ. ಮಧ್ಯಾಹ್ನ 4 ಗಂಟೆ ನಂತರ 2 ಕಿ.ಮೀ. ದೂರದ ಅಂದಾಜು 1 ಸಾವಿರ ಅಡಿ ಎತ್ತರದ ಗಿರಿ ಏರಿದ್ದಾರೆ. ಅಲ್ಲಿ ಸಿದ್ದೇಶ್ವರ ಸ್ವಾಮಿ ದೇವಸ್ಥಾನ, ಹುಲಿ ಗುದ್ದು, ಮಾಳಿಂಗಮ್ಮ ದೇವರಿದ್ದು ಪೂಜೆ ಸಲ್ಲಿಸಿದರು. ನಂತರ ಗಿರಿ ಮೇಲೆ ಇರುವ ಕಲ್ಲಿನ 35 ಅಡಿ ಎತ್ತರ ಇರುವ ಕಂಬದ ಮೇಲೆ ಮಡಕೆಯಲ್ಲಿ ದೀಪ ಹಚ್ಚಿದರು. ರಾತ್ರಿ ಇಡೀ ದೀಪ ಆರದೆ ಉರಿಯುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಹುಲಿ ಗುದ್ದುವಿನಲ್ಲಿ ಗುಹೆ ಇದ್ದು ಅಲ್ಲಿಂದ ಕೊಪ್ಪ ತಾಲೂಕಿನ ಸಿದ್ದರಮಠ ದೇವಸ್ಥಾನಕ್ಕೆ ಸುರಂಗ ಮಾರ್ಗವಿದೆ ಎಂಬುದು ಗ್ರಾಮಸ್ಥರ ನಂಬಿಕೆ. ಹುಲಿ ಗುದ್ದಿನಲ್ಲಿ ದೀಪ ಹಚ್ಚಿದರೆ ಹುಲಿಗಳು ಹಸುವನ್ನು ತಿನ್ನದೆ ಹಸುಗಳು ಆರೋಗ್ಯದಿಂದ ಕಾಡಿನಲ್ಲಿ ಮೇಯ್ದುಕೊಂಡು ಬರುತ್ತದೆ ಎಂಬ ಪ್ರತೀತಿ ಇದೆ ಎನ್ನುತ್ತಾರೆ ಗ್ರಾಮಸ್ಥರು.