ನ್ಯೂಸ್

ಸಿದ್ದರಾಮಯ್ಯ ಹೆದರಲ್ಲ, ಜಗ್ಗುವುದಿಲ್ಲ

ಚಿತ್ರದುರ್ಗ: ನೂರು ಬಾರಿ ಸುಳ್ಳು ಹೇಳಿ ಸತ್ಯ ಮಾಡಲು ಹೊರಟಿರುವ ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ಸಿಗರು ಹೆದರುವ, ಜಗ್ಗುವ ಪ್ರಶ್ನೆಯೇ ಇಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚಾಮುಂಡೇಶ್ವರಿ ಅಮ್ಮನ ಸನ್ನಿಧಾನದ ಮುಂದೆ ಸಿದ್ದರಾಮಯ್ಯ ಸತ್ಯ ಹೇಳಿದ್ದಾರೆ. ನಾಡದೇವಿ ಮುಂದೆ ನಿಂತು ಪ್ರಮಾಣ ಮಾಡಲು ಬಿಜೆಪಿಗರಿಗೆ ಧೈರ್ಯವಿದೆಯೇ? ಎಂದು ಪ್ರಶ್ನಿಸಿದ ರಾಜಣ್ಣ, ಬಿಜೆಪಿ ನಾಯಕರ ತಪ್ಪುಗಳನ್ನು ಜನರಿಗೆ ಮನವರಿಕೆ ಮಾಡಲು ನಾವು ತಯಾರಿ ನಡೆಸಿದ್ದೇವೆ ಎಂದರು.

ರಾಜ್ಯದಲ್ಲಿ ಬಿಜೆಪಿ ನಾಯಕರು ವಿರೋಧ ಪಕ್ಷವಾಗಿ ಕೆಲಸ ಮಾಡಬೇಕಿತ್ತು. ಆದರೆ, ಅವರ ಬದಲು ಎಚ್.ಡಿ.ಕುಮಾರಸ್ವಾಮಿ ಆ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಮಾಡೋದಕ್ಕೆ ಕೆಲಸವಿಲ್ಲದೆ, ಸುಳ್ಳು ಆರೋಪ ಮಾಡುತ್ತಿದ್ದು, ಇದಕ್ಕೆ ಜನರು ಮರುಳಾಗುವುದಿಲ್ಲ ಎಂದು ತಿರುಗೇಟು ನೀಡಿದರು.

ಮುಡಾ ನಿವೇಶನಕ್ಕಾಗಿ ಸಿದ್ದರಾಮಯ್ಯ ಅರ್ಜಿ ಹಾಕಿರಲಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ನೀಡಿದ್ದಾರೆ. ತಪ್ಪು ಮಾಡಿದರೆ, ಒಪ್ಪಿಕೊಳ್ಳಬಹುದು. ಅಪಪ್ರಚಾರಕ್ಕೆ ಉತ್ತರಿಸಲು ಸಾಧ್ಯವಿಲ್ಲ. ಬಡವರ ಕುರಿತು ಕಾಳಜಿ ಇರುವ ಸಿಎಂಗೆ ಜನಾಶೀರ್ವಾದವಿದೆ ಎಂದು ಹೇಳಿದರು.