ಹುಣಸೂರು: ತಾಲೂಕಿನ ಮಂಟಿಕೊಪ್ಪಲು ಗ್ರಾಮದಲ್ಲಿ ಶನಿವಾರ ರಾತ್ರಿ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟಿದ್ದಾರೆ.
ಬಿಳಿಕೆರೆ ಹೋಬಳಿ ಮಂಟಿಕೊಪ್ಪಲು ಗ್ರಾಮದ ಹರೀಶ್(40) ಮೃತಪಟ್ಟವರು. ಇವರಿಗೆ ಪತ್ನಿ, ಇಬ್ಬರು ಪುತ್ರರಿದ್ದಾರೆ.
ಶನಿವಾರ ಸಂಜೆ ಸುರಿದ ಭರ್ಜರಿ ಮಳೆಗೆ ಸಂತಸಗೊಂಡ ಹರೀಶ್, ಭಾನುವಾರ ಬೆಳಗ್ಗೆ ಕೃಷಿ ಕಾರ್ಯಕ್ಕಾಗಿ ಗ್ರಾಮದ ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ಬರಲು ಹೇಳಿ ವಾಪಸಾಗುತ್ತ್ತಿದ್ದರು. ಈ ವೇಳೆ ಅವರ ಜಮೀನಿನ ಬಳಿ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಜಿ.ಡಿ.ಹರೀಶ್‌ಗೌಡ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಧನಸಹಾಯ ಮಾಡಿದರು. ಮೃತರ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ದೊರಕಲಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಇದೇ ವೇಳೆ ಸೂಚಿಸಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಕೆಂಪೇಗೌಡ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಉದಯ್, ಕಂದಾಯ ನಿರೀಕ್ಷಕ ನಂದೀಶ್, ಗ್ರಾಮಲೆಕ್ಕಿಗ ಸುಮಂತ್ ಇದ್ದರು.