ಚನ್ನಪಟ್ಟಣ : ವಿರೋಧ ಪಕ್ಷಗಳು ನಮ್ಮ ಪಕ್ಷದವರ ಜತೆಯಲ್ಲಿ ಚೆನ್ನಾಗಿಯೇ ಇದ್ದಾರೆ. ಹಾಗಾಗಿ ನಾವೇ ವಿರೋಧ ಪಕ್ಷವಾಗಿ ಕೆಲಸ ಮಾಡುವ ಸಂದರ್ಭ ಬಂತು ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ಸುಣ್ಣಘಟ್ಟ ಸಮೀಪದ ಕರಣ್‌ಗೌಡ ಫಾರ್ಮ್ ಬಳಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹೈಕಮಾಂಡ್ ಸೂಚಿಸಿದರೆ ಯಾವುದೇ ಸಮಯದಲ್ಲೂ ರಾಜೀನಾಮೆಗೆ ಸಿದ್ಧ ಎಂಬ ಸಿಎಂ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಈ ವಿಚಾರವಾಗಿ ಯಾವುದೇ ಹೇಳಿಕೆ ನೀಡುವುದಿಲ್ಲ. ಈಗಾಗಲೇ ನನ್ನ ಹೇಳಿಕೆಗಳು ಸಾಕಷ್ಟು ಸುದ್ದಿಯಾಗಿವೆ. ನಾನು ಮುಖ್ಯಮಂತ್ರಿಗಳ ಬಗ್ಗೆ ಮಾತನಾಡುವುದಿಲ್ಲ. ಸಿಎಂ ಬಗ್ಗೆ ಮಾತನಾಡಿದರೆ ಸುಖಾಸುಮ್ಮನೆ ವಿವಾದವಾಗುತ್ತಿದೆ ಎಂದರು.
ವಿರೋಧ ಪಕ್ಷಗಳು ನಮ್ಮ ಪಕ್ಷದ ಜತೆ ಚೆನ್ನಾಗಿರುವ ಕಾರಣ, ಇದು ಮೂರು ಪಕ್ಷಗಳ ಸರ್ಕಾರ ಎಂದು ಜನ ತಿಳಿದುಕೊಂಡಿದ್ದಾರೆ ಎನ್ನುವ ಹೇಳಿಕೆ ನೀಡಿದ್ದೆ. ಆದರೆ ಅದನ್ನು ತಿರುಚಲಾಯಿತು. ನಾಯಕತ್ವ ಬದಲಾವಣೆ ಮಾಡುವಷ್ಟು ದೊಡ್ಡವನು ನಾನಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ನಮ್ಮ ಪಕ್ಷದಲ್ಲಿ ಉನ್ನತ ನಾಯಕರು ಇದ್ದಾರೆ. ಅವರು ತೆಗೆದುಕೊಳ್ಳುವ ತೀರ್ಮಾನದಂತೆ ನಾವು ನಡೆದುಕೊಳ್ಳಬೇಕಾಗುತ್ತದೆ. ಪಕ್ಷ ರಾಜೀನಾಮೆ
ಕೇಳಿದರೆ ನಾನೂ ಕೊಡಬೇಕು ಎಂದರು.
ಯಡಿಯೂರಪ್ಪ ಅವರ ಬಗ್ಗೆ ನಾನು ಎಂದಿಗೂ ಕಠೋರವಾಗಿ ಮಾತನಾಡಿಲ್ಲ. ನಾನು ಅವರ ಬಗ್ಗೆ ಯಾವತ್ತಿಗೂ ಸಾಫ್ಟ್ ಆಗಿದ್ದೇನೆ. ಅವರು ನಮ್ಮ ನಾಯಕರು, ಅವರ ವಿರುದ್ಧ ಹಿಂದೆಯೂ ಮಾತನಾಡಿಲ್ಲ, ಮುಂದೆಯೂ ಮಾತನಾಡಲ್ಲ. ಕರೊನಾ ಸಂಕಷ್ಟದ ಸಮಯದಲ್ಲಿ ಮುಖ್ಯಮಂತ್ರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ, ಅವರಿಗೆ ಎಲ್ಲ ರೀತಿಯಲ್ಲಿ ಸಹಕಾರ ನೀಡುತ್ತಿದ್ದೇವೆ, ರಾಜಕೀಯದ ಬಗ್ಗೆ ಮಾತನಾಡುವ ಸಮಯ ಇದಲ್ಲ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲವೇಗೌಡ, ಪಕ್ಷದ ನಗರ ಬಿಜೆಪಿ ಅಧ್ಯಕ್ಷ ಆರ್. ಶಿವಕುಮಾರ್, ಪಕ್ಷದ ವಕ್ತಾರ ಗೋಪಿಕೃಷ್ಣ, ಪಕ್ಷದ ಮುಖಂಡರಾದ ಬ್ರಹ್ಮಣೀಪುರ ಪ್ರಸನ್ನ, ತಗಚಗೆರೆ ಕುಳ್ಳಪ್ಪ, ಬಸವರಾಜು, ಚಕ್ಕಲೂರು ಚೌಡಯ್ಯ, ಶರತ್, ಕೋಟೆಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
ಸಂಕಷ್ಟಕ್ಕೆ ಬಿಜೆಪಿ ಸ್ಪಂದಿಸುತ್ತಿದೆ : ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವವರಿಗೆ ಬಿಜೆಪಿ ನಿರಂತರವಾಗಿ ಸ್ಪಂದಿಸುತ್ತಿದೆ. ಬಡವರು, ನಿರ್ಗತಿಕರಿಗೆ ಪ್ರತಿದಿನ ಪಕ್ಷದ ಕಾರ್ಯಕರ್ತರು ಎರಡು ಹೊತ್ತು ಊಟ ನೀಡುತ್ತಿದ್ದಾರೆ. ಶನಿವಾರ 1 ಲಕ್ಷ ಮಾಸ್ಕ್‌ಗಳನ್ನು ವಿತರಿಸಿದ್ದೇವೆ. ಪಕ್ಷದ ಮುಖಂಡ ಗೋವಿಂದರಾಜು 500ಕ್ಕೂ ಹೆಚ್ಚು ದಿನಸಿ ಕಿಟ್ ವಿತರಿಸುತ್ತಿದ್ದು, ಕಾರ್ಯಕ್ರಮಕ್ಕೆ ಚಾಲನೆ ನೀಡಲು ಬಂದಿದ್ದೇನೆ. ರಾಜಕೀಯ ಹೆಚ್ಚು ಮಾತನಾಡಲ್ಲ, ನೀವೂ ಅದರ ಬಗ್ಗೆ ಪ್ರಶ್ನೆ ಕೇಳಬೇಡಿ ಎಂದು ಯೋಗೇಶ್ವರ್ ಮನವಿ ಮಾಡಿದರು.