ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಪ್ರಕರಣ ಸಂಬಂಧ ಲೋಕಾಯುಕ್ತ ಅಧಿಕಾರಿಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒತ್ತಡದಿಂದ ವರದಿ ಸಿದ್ಧವಾಗಿದ್ದು, ಲೋಕಾಯುಕ್ತಕ್ಕೆ ಇದ್ದ ಮರ್ಯಾದೆಯನ್ನು ಅಧಿಕಾರಿಗಳು ಕಳೆದಿದ್ದಾರೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಕಿಡಿಕಾರಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ಅಧಿಕಾರಿಗಳು ಸಿಎಂ ಪರವಾದ ವರದಿಯನ್ನು ಕೊಡುತ್ತದೆ ಎಂಬುದು ಮೊದಲೇ ಗೊತ್ತಿತ್ತು. ಈ ವರದಿಯನ್ನು ನಾವು ಖಂಡಿಸುತ್ತೇವೆ. ಲೋಕಾಯುಕ್ತಕ್ಕೆ ಎಲ್ಲ ದಾಖಲೆಗಳನ್ನು ಕೊಟ್ಟಿದ್ದೇವೆ. ಹೀಗಿದ್ದರೂ ಸತ್ಯವನ್ನು ಮರೆಮಾಚುವ ವರದಿ ನೀಡಿದ್ದಾರೆ ಎಂದು ಹೇಳಿದರು.
ಮುಡಾ ಪ್ರಕರಣದಲ್ಲಿ ಸಿಎಂ ಮುಗ್ಧರು. ಏನೂ ತಪ್ಪು ಮಾಡಿಲ್ಲ ಎನ್ನುವುದಾದರೇ 14 ನಿವೇಶನಗಳನ್ನು ಏಕೆ ವಾಪಸ್ ಕೊಟ್ಟರು. ಸಚಿವ ಭೈರತಿ ಸುರೇಶ್ 141 ಕಡತಗಳನ್ನು ಬೆಂಗಳೂರಿಗೆ ಕೊಂಡೊಯ್ದರು. ಅದರಲ್ಲೇ ಸಿಎಂ ಕುಟುಂಬದ ಸಾಕ್ಷಿ ಇರಬಹುದು ಎಂದು ಆರೋಪಿಸಿದರು.
ಇಡಿ ಹಗರಣ ನಡೆದಿರುವ ವಿಚಾರವನ್ನು ಪ್ರಸ್ತಾಪಿಸಿದೆ. ಲೋಕಾಯುಕ್ತ ಅಧಿಕಾರಿಗಳು ಒತ್ತಡಕ್ಕೆ ಮಣಿದಿರುವುದು ಕಾಣಿಸುತ್ತದೆ ಎಂದರು. ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಗೃಹ ಇಲಾಖೆಯಿಂದ ಸಾಕಷ್ಟು ಒತ್ತಡ ಇದೆ. ನಾವು ಹೋರಾಟ ಮಾಡುತ್ತೇವೆ ಎಂದಿದ್ದಕ್ಕೆ ಮೌಲ್ವಿಯನ್ನು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ಟಿಲ್ಲ. ನಾನು ಕೂಡ ಪೊಲೀಸ್ ಆಯುಕ್ತರನ್ನು ಭೇಟಿ ಮಾಡುತ್ತೇನೆ. ಘಟನೆ ಸಂಬಂಧ ಪೊಲೀಸರಿಗೆ ಸಾರ್ವಜನಿಕರು ಮತ್ತು ನಾವು ಇರುತ್ತೇವೆ ಎನ್ನುವುದನ್ನು ಹೇಳಲಿದ್ದೇವೆ ಎಂದರು.