ನಂಜನಗೂಡು ತಾಲೂಕಿನ ಸಿಂಗಾರಿಪುರ ಗ್ರಾಮಸ್ಥರು ಬಸ್ ತಡೆದು ಪ್ರತಿಭಟನೆ ನಡೆಸಿದರು. ಆರ್.ಸುಂದರೇಶ್, ಕರಿಯಪ್ಪ, ಹರೀಶ್ ಸೇರಿದಂತೆ ಇತರರಿದ್ದರು. 
ನ್ಯೂಸ್

ಸಿಂಗಾರಿಪುರ ಪ್ರಯಾಣಿಕರ ಪ್ರತಿಭಟನೆ

ನಂಜನಗೂಡು: ನಿಗದಿತ ಸಮಯಕ್ಕೆ ಸರಿಯಾಗಿ ಸಾರಿಗೆ ಬಸ್ ಸೇವೆ ದೊರಕುತ್ತಿಲ್ಲ ಎಂದು ಆಪಾದಿಸಿ ತಾಲೂಕಿನ ಸಿಂಗಾರಿಪುರ ಗ್ರಾಮದ ಪ್ರಯಾಣಿಕರು ಬಸ್ ತಡೆದು ಶನಿವಾರ ಪ್ರತಿಭಟನೆ ನಡೆಸಿದರು.

ಬೆಳಗ್ಗೆ 8 ಗಂಟೆ ವೇಳೆಗೆ ಸಿಂಗಾರಿಪುರಕ್ಕೆ ಬರಬೇಕಾದ ಬಸ್ ನಿಗದಿತ ಸಮಯಕ್ಕೆ ಬರುವುದಿಲ್ಲ. ಬೆಳಗ್ಗೆ, ಸಂಜೆ ಮಾತ್ರ ಬಸ್ ಸೇವೆ ಇರುವುದರಿಂದ ಇನ್ನೂ ಮೂರ‌್ನಾಲ್ಕು ಬಾರಿ ಬಸ್ ಸಂಚಾರ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ಬಸ್ ತಡೆದು ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಸ್ಥಳಕ್ಕೆ ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕರು ಭೇಟಿ ನೀಡಿ ಸಮಸ್ಯೆ ಆಲಿಸುವರೆಗೂ ಬಸ್ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ಯುವ ಮುಖಂಡ ಆರ್.ಸುಂದರೇಶ್ ಮಾತನಾಡಿ, ದೇವರಸನಹಳ್ಳಿ, ಮಾಡ್ರಹಳ್ಳಿ, ಸಿಂಗಾರಿಪುರ ಮಾರ್ಗವಾಗಿ ಬೆಳಗ್ಗೆ ಹಾಗೂ ಸಂಜೆ ವೇಳೆ ಎರಡು ಬಾರಿ ಮಾತ್ರ ಕೆಎಸ್‌ಆರ್‌ಟಿಸಿ ಬಸ್ ಸೇವೆಯಿದೆ. ಬೆಳಗ್ಗೆ 8 ಗಂಟೆಗೆ ನಿಗದಿಯಾದ ಸಮಯಕ್ಕೆ ಬಸ್ ಬರಲ್ಲ. ಇದರಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಉದ್ಯೋಗ ನಿಮಿತ್ತ ತೆರಳುವ ನೌಕರರು ಸರಿಯಾದ ಸಮಯಕ್ಕೆ ತಲುಪಲು ಆಗದೇ ಪರಿತಪಿಸುವಂತಾಗಿದೆ. ಈ ಬಗ್ಗೆ ಅನೇಕ ಬಾರಿ ದೂರು ನೀಡಿದರೂ ಸಮಸ್ಯೆ ಪರಿಹರಿಸಿಲ್ಲ ಎಂದು ಆಪಾದಿಸಿದರು.

ಬಸ್ ಸೇವೆ ದಿನದಲ್ಲಿ ಎರಡು ಬಾರಿ ಮಾತ್ರ ಇರುವುದರಿಂದ ಈ ಭಾಗದ ಜನರು ಆಟೋ ರಿಕ್ಷಾಗಳನ್ನೇ ಅವಲಂಬಿಸಿಕೊಂಡಿದ್ದಾರೆ. ಹೆಚ್ಚುವರಿ ಪ್ರಯಾಣಿಕರನ್ನು ತುಂಬಿಕೊಂಡು ರಿಕ್ಷಾಗಳಲ್ಲಿ ತೆರಳುವುದು ಸಾಮಾನ್ಯವಾಗಿಬಿಟ್ಟಿದ್ದು, ಇದರಿಂದ ಅನಾಹುತ ಆಗುವ ಸಾಧ್ಯತೆಯೂ ಇರುತ್ತದೆ. ಅನಾಹುತ ತಪ್ಪಿಸುವ ಸಲುವಾಗಿ ಸಾರಿಗೆ ಬಸ್ ಸೇವೆಯನ್ನೇ ಹೆಚ್ಚಳ ಮಾಡಿ ಈ ಭಾಗದ ಗ್ರಾಮಗಳ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ಬಸ್ ನಿಯಂತ್ರಣಾಧಿಕಾರಿ ಹರ್ಷ, ಡಿಪೋ ವ್ಯವಸ್ಥಾಪಕರು ಮೇಲಧಿಕಾರಿಗಳ ಸಭೆಯಲ್ಲಿ ಭಾಗವಹಿಸಲು ತೆರಳಿರುವುದರಿಂದ ಅವರಿಗೆ ಈಗಾಗಲೇ ನಿಮ್ಮ ಬೇಡಿಕೆ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ನಿಗದಿತ ಸಮಯಕ್ಕೆ ಬಸ್ ಸೇವೆ ಹಾಗೂ ಟ್ರಿಪ್ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಮನವೊಲಿಸಿದ ಬಳಿಕ ಗ್ರಾಮಸ್ಥರು ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಕರಿಯಪ್ಪ, ಗ್ರಾಮಸ್ಥರಾದ ಹರೀಶ್, ಪ್ರಕಾಶ್, ರಂಗಸ್ವಾಮಿ, ಜಯಕುಮಾರ್ ಸೇರಿದಂತೆ ಇತರರಿದ್ದರು.