ಮೈಸೂರು: ಸಾಹಿತ್ಯ ಕ್ಷೇತ್ರದಲ್ಲಿ ನಮಗೆ ಅನಿಸಿದ ಎಲ್ಲವನ್ನೂ ಬರೆಯಬಹುದು ಅದಕ್ಕೆ ಯಾವುದೇ ಚೌಕಟ್ಟು ಇರುವುದಿಲ್ಲ. ಆದರೆ ವಿಜ್ಞಾನದಲ್ಲಿ ಸ್ವಾತಂತ್ರೃವಿರುವುದಿಲ್ಲ. ಎಲ್ಲದಕ್ಕೂ ಅಧ್ಯಯನ ಮಾಡಬೇಕು. ಸಾಕ್ಷಿಗಳನ್ನು ಒದಗಿಸಿ ಜನರನ್ನು ಒಪ್ಪಿಸಬೇಕಿದೆ. ಈ ಹಿನ್ನೆಲೆಯಲ್ಲಿ ಸಾಹಿತಿಗಳು ವಿಜ್ಞಾನಿಗಳಾಗಲು ಸಾಧ್ಯವಾಗಿಲ್ಲ ಎಂದು ಕೃಷಿ ವಿಜ್ಞಾನಿ, ಸಾಹಿತಿ ಡಾ.ಕೆ.ಎನ್.ಗಣೇಶಯ್ಯ ಅಭಿಪ್ರಾಯಪಟ್ಟರು.
‘ಮೈಸೂರು ಸಾಹಿತ್ಯ ಸಂಭ್ರಮ-2025’ ಕಾರ್ಯಕ್ರಮದಲ್ಲಿ ಭಾನುವಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂರ್ಣಚಂದ್ರ ತೇಜಸ್ವಿ ಅವರು ವೈಜ್ಞಾನಿಕವಾಗಿ ಸಾಕಷ್ಟು ಸಂಶೋಧನೆ ಮಾಡಿದ್ದಾರೆ. ಆದರೆ ಅದನ್ನು ಪ್ರಕಟಣೆ ಮಾಡಲು ಮುಂದಾಗಲಿಲ್ಲ ಎಂದು ತಿಳಿಸಿದರು.
ಸಾಹಿತಿ, ವಿಜ್ಞಾನಿ ಇಬ್ಬರಿಗೂ ಪ್ರಕೃತಿ ಭೇದಿಸುವ ಕೆಲಸವಿದೆ. ವಿಜ್ಞಾನ ನನಗೆ ಕೆಲಸ ಜ್ಞಾನ ನೀಡಿದೆ. ಸಾಹಿತ್ಯ ಪ್ರಸಿದ್ಧಿ ನೀಡಿದ್ದು, ವಿಜ್ಞಾನ ಕ್ಷೇತ್ರದಿಂದ ಸಾಹಿತ್ಯ ಲೋಕಕ್ಕೆ ಬಹಳಷ್ಟು ಸಾಹಿತಿಗಳು ಬಂದಿದ್ದಾರೆ. ಆದರೆ, ವಿಜ್ಞಾನ ಕ್ಷೇತ್ರಕ್ಕೆ ಯಾವುದೇ ಸಾಹಿತಿಗಳನ್ನು ಕಾಣಲು ಸಾಧ್ಯವಿಲ್ಲ. ವಿಜ್ಞಾನಿಗಳು ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದರು. ವಿಜ್ಞಾನ ಲೇಖಕ ಕೊಳ್ಳೆಗಾಲ ಶರ್ಮ ಇದ್ದರು.