ಹನಗೋಡು ಹೋಬಳಿಯ ಕರಣಕುಪ್ಪೆ ಗ್ರಾ.ಪಂ. ವ್ಯಾಪ್ತಿಯ ಕಣಗಾಲು ಗ್ರಾಮದಲ್ಲಿ ರೈತರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ರೈತರಿಗೆ ಮಾಹಿತಿ ನೀಡಲಾಯಿತು. 
ನ್ಯೂಸ್

ಸಾವಯವ ಗೊಬ್ಬರ ಬಳಕೆ, ನೀರಿನ ಮಿತ ಬಳಕೆಯಿಂದ ಇಳುವರಿ

ಹನಗೋಡು: ರೈತರು ಜಮೀನುಗಳಲ್ಲಿ ಸಾವಯವ ಗೊಬ್ಬರ ಬಳಕೆ ಮತ್ತು ಕಡಿಮೆ ನೀರು ನಿರ್ವಹಣೆಯಿಂದ ಹೆಚ್ಚು ಇಳುವರಿ ಗಳಿಸಬಹುದು ಎಂದು ಕೆವಿಕೆ ವಿಜ್ಞಾನಿ ಮಂಜುನಾಥ್ ಅಂಗಡಿ ತಿಳಿಸಿದರು.


ಹನಗೋಡು ಹೋಬಳಿ ಕರಣಕುಪ್ಪೆ ಗ್ರಾ.ಪಂ. ವ್ಯಾಪ್ತಿಯ ಕಣಗಾಲು ಗ್ರಾಮದಲ್ಲಿ ಐಟಿಸಿ, ಎಂಎಸ್‌ಕೆ, ಔಟ್‌ರೀಚ್ ಸಂಸ್ಥೆ ಮತ್ತು ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ಗುರುವಾರ ರೈತರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.


ಸಾವಯಾವ ಗೊಬ್ಬರ ಬಳಕೆ ಮತ್ತು ಕಡಿಮೆ ನೀರು ನಿರ್ವಹಣೆಯಿಂದ ಭತ್ತ, ಬಾಳೆ, ತೆಂಗು, ಅಡಕೆ ಬೆಳೆಗಳಿಗೆ ಖರ್ಚು ಕಡಿಮೆ ಮಾಡುವುದರ ಜತೆಗೆ ಹೆಚ್ಚು ಇಳುವರಿ ಗಳಿಸಬಹುದು. ಈ ಭಾಗದ ರೈತರು ಮಳೆ ಮತ್ತು ಕೊಳವೆಬಾವಿಯ ನೀರಿನ ಆಶ್ರಯದಿಂದ ವ್ಯವಸಾಯ ಮಾಡುವುದರಿಂದ ಬಾಳೆ, ಅಡಕೆ ಮತ್ತು ಶುಂಠಿ ಬೆಳೆಗಳನ್ನು ಬೆಳೆಯಲು ಹನಿ ಹಾಗೂ ತುಂತುರು ನೀರಾವರಿ ಪದ್ಧತಿಯನ್ನು ಬಳಕೆ ಮಾಡಿಕೊಂಡು ವ್ಯವಸಾಯ ಮಾಡುವುದು ಸೂಕ್ತ. ಶುಂಠಿ ಬೆಳೆಯಲು ಬೀಜ ಹಾಕುವುದರಿಂದ ದುಬಾರಿ ವೆಚ್ಚವಾಗುತ್ತದೆ. ಅದರ ಬದಲಿಗೆ 20 ದಿನಗಳ ಕಾಲ ಸಸಿ ಬೆಳೆಸಿ ನಾಟಿ ಮಾಡುವ ಮೂಲಕ ಉತ್ತಮ ಇಳುವರಿ ಗಳಿಸಬಹುದೆಂದರು.


ಔಟ್‌ರೀಚ್ ಸಂಸ್ಥೆಯ ಕೃಷಿ ತಾಂತ್ರಿಕ ಸಲಹೆಗಾರರಾದ ಪಿ.ಸಹನಾ ಮಾತನಾಡಿ ಟ್ರೈಕೊಡರ್ಮ, ಸುಡೊಮಸ್ಸ್, ಎ.ಎಂ.ಸಿ, ಬೊರೊಮ್ಯಾಕ್ಸ್ ಔಷಧ ಬಳಸುವುದರಿಂದ ತೆಂಗು, ಬಾಳೆ,ಅಡಕ ಮತ್ತು ಶುಂಠಿ ಬೆಳೆಗಳಿಗೆ ಬರುವ ಸೊರಗು, ತರಗು, ಕೊಳವೆ ರೋಗವನ್ನು ತಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.

ಗ್ರಾ.ಪಂ. ಉಪಾಧ್ಯಕ್ಷ ಮಾದೇಗೌಡ, ಗ್ರಾಪಂ ಸದಸ್ಯರಾದ ಕುಮಾರಸ್ವಾಮಿ, ಪಾಪಣ್ಣ, ಹರೀಶ ಮಾವುಡು, ಸೋಮಶೇಖರ್, ಬೀರಪ್ಪ, ಪಿಡಿಒ ರಾಮಣ್ಣ, ಔಟ್‌ರೀಚ್ ಸಂಸ್ಥೆಯ ಯೋಜನಾ ಸಮನ್ವಯಾಧಿಕಾರಿ ಮಹದೇವ್, ಪ್ರಗತಿ ಪರ ರೈತರಾದ ಕೆ.ರಾಜು, ಕೆಂಪನಾಯಕ, ಕಣಗಾಲಮ್ಮ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಪಿ.ರಾಘವೇಂದ್ರ ಇದ್ದರು.