ಹುಣಸೂರು ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದ ಪಾಲಕರು ಮತ್ತು ವಿದ್ಯಾರ್ಥಿನಿಯರು. 
ನ್ಯೂಸ್

ಸಾಲು ಸಾಲು ಸಮಸ್ಯೆಗಳು….


ಹುಣಸೂರು ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಪಾಲಕರು, ವಿದ್ಯಾರ್ಥಿಗಳ ಸಭೆ


ಹುಣಸೂರು: ಊರಿಂದ ಕಾಲೇಜಿಗೆ ಬರಲು ಸಕಾಲದಲ್ಲಿ ಬಸ್ ವ್ಯವಸ್ಥೆ ಇಲ್ಲ…ದಯವಿಟ್ಟು ಬಸ್ ಸೌಕರ್ಯ ಕಲ್ಪಿಸಿ.. ಕಾಲೇಜಿನಲ್ಲಿ ಶೌಚಗೃಹ ದುರಸ್ತಿಗೊಳಿಸಿ..ಗ್ರಂಥಾಲಯದಲ್ಲಿ ಇನ್ನಷ್ಟು ಪುಸ್ತಕಗಳ ಅವಶ್ಯಕತೆಯಿದೆ.. ಕಾಲೇಜು ಕ್ಯಾಂಟೀನ್ ಸ್ಥಾಪಿಸಿ…


ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ 2022-23ನೇ ಸಾಲಿನ ಪಾಲಕರ ಸಭೆಯಲ್ಲಿ ಪಾಲಕರು ಮತ್ತು ವಿದ್ಯಾರ್ಥಿಗಳಿಂದ ಕೇಳಿಬಂದ ಅಹವಾಲುಗಳಿವು.


ಸಭೆಯಲ್ಲಿ ಪಾಲಕರಾದ ರಾಮಪಟ್ಟಣದ ರವಿಗೌಡ, ಕೂಡ್ಲೂರು ಆನಂದ್ ಬಸ್ ಅವ್ಯವಸ್ಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಮಕ್ಕಳು ಶಾಲಾ- ಕಾಲೇಜಿಗೆ ತೆರಳಲು ಬಸ್ ಸೌಕರ್ಯವೇ ಇಲ್ಲ. 10-20 ಕಿ.ಮೀ. ದೂರದಿಂದ ಪಟ್ಟಣಕ್ಕೆ ಬೈಕ್‌ನಲ್ಲಿ ಮಕ್ಕಳನ್ನು ಕರೆತಂದು ಸಂಜೆ ಕರೆದುಕೊಂಡು ಹೋಗಬೇಕಿದೆ. ರೈತರಾದ ನಾವು ಕೃಷಿ ಕಾರ್ಯ ಬಿಟ್ಟು ಬರಬೇಕಾಗಿದೆ. ನಮ್ಮೂರಿಗೆ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಕೋರಿದರು.


ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಕೋವಿಡ್ ನಂತರದ ದಿನಗಳಲ್ಲಿ ಸಾರಿಗೆ ವ್ಯವಸ್ಥೆ ಅವ್ಯವಸ್ಥೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಸುಧಾರಿಸುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಸ್ ಸೇವೆ ಸಿಗುತ್ತಿದ್ದರೂ ಕೆಲವೆಡೆ ಸಮಸ್ಯೆ ಇನ್ನೂ ಇದೆ. ಈ ಕುರಿತು ಕೆಎಸ್‌ಆರ್‌ಟಿಸಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.


ತೃತೀಯ ವರ್ಷದ ವಿದ್ಯಾರ್ಥಿನಿ ಅನುಷಾ ಮಾತನಾಡಿ, ಕಾಲೇಜು ಆವರಣದಲ್ಲಿ ರಿಯಾಯಿತಿ ದರದಲ್ಲಿ ತಿಂಡಿ ಪದಾರ್ಥಗಳು ದೊರೆಯುವಂತೆ ಕ್ಯಾಂಟೀನ್ ಸ್ಥಾಪಿಸಿ ಎಂದು ಕೋರಿದರು. ಕನ್ನಡ ಐಚ್ಛಿಕ ವಿಷಯಕ್ಕೆ ಅಧ್ಯಾಪಕರ ಕೊರತೆ ಇದೆ ಎಂದು ಪ್ರತಿಭಾ ಗಮನ ಸೆಳೆದರೆ, ಹಿಂದಿ ಮತ್ತು ಉರ್ದು ಭಾಷೆಗೆ ಪ್ರಾಧ್ಯಾಪಕರಿಲ್ಲದೆ ಮೊದಲ ಸೆಮ್ ಪೂರೈಸಿದ್ದೇವೆ. ಈಗಲಾದರೂ ಅತಿಥಿ ಶಿಕ್ಷಕರನ್ನು ನೇಮಿಸಿ ಎಂದು ಸಲೀನಾ ಮನವಿ ಮಾಡಿದರು.


ಕಾಲೇಜಿನಲ್ಲಿ ಶೌಚಗೃಹಗಳ ಅವ್ಯವಸ್ಥೆ ಕಾಡುತ್ತಿದೆ. 1100 ವಿದ್ಯಾರ್ಥಿನಿಯರು ಇಲ್ಲಿ ವ್ಯಾಸಂಗ ಮಾಡುತ್ತಿದ್ದು, ಶೌಚಗೃಹ ಮತ್ತು ನೀರಿನ ಸಮರ್ಪಕ ವ್ಯವಸ್ಥೆ ಆಗಲಿ ಎಂದು ಪ್ರಥಮ ವರ್ಷದ ವಿದ್ಯಾರ್ಥಿನಿ ಪದ್ಮಾ ಸಭೆಯ ಗಮನಕ್ಕೆ ತಂದರು.


5 ಕೋಟಿ ರೂ. ವೆಚ್ಚದಲ್ಲಿ ನೂತನ ಕೊಠಡಿಗಳ ಸಮುಚ್ಛಯ ಕಾಮಗಾರಿ ಪೂರ್ಣಗೊಳ್ಳುತ್ತಿದೆ. ಅಲ್ಲದೆ ಕ್ಯಾಂಪಸ್‌ನಲ್ಲಿರುವ ಮತ್ತೊಂದು ದುಸ್ಥಿತಿ ಕಟ್ಟಡವನ್ನು ಕೆಡವಿ ನೂತನ ಕಟ್ಟಡ ನಿರ್ಮಾಣಕ್ಕೆ 1 ಕೋಟಿ ರೂ.ಅನುದಾನ ದೊರಕಿದೆ. ನಗರದ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಎನ್‌ಸಿಸಿ ಮಂಜೂರಾಗಿದ್ದು, ಈ ಕಾಲೇಜಿಗೂ ಒದಗಿಸಲು ಕ್ರಮವಹಿಸಲಾಗುವುದು. ಶೌಚಗೃಹಗಳ ನಿರ್ವಹಣೆಗೆ ಸಿಡಿಸಿಗೆ ಸೂಚಿಸಲಾಗುವುದು ಎಂದ ಶಾಸಕ ಎಚ್.ಪಿ.ಮಂಜುನಾಥ್, ಎಲ್ಲ ಕಟ್ಟಡ ನಿರ್ಮಾಣಗಳ ಕಾಮಗಾರಿ ಸಂಪೂರ್ಣಗೊಂಡ ನಂತರ ಮೂಲಸೌಕರ್ಯ ಒದಗಿಸಲಾಗುವುದು ಎಂದರು.


ನಿಮ್ಮಿಂದ ಸಹಕಾರ ನಿರೀಕ್ಷೆ: ಕಾಲೇಜಿಗೆ ನ್ಯಾಕ್‌ನಿಂದ ಬಿ ಮಾನ್ಯತೆ ದೊರಕಿದ್ದು, ಮುಂದಿನ ಹಂತದ ಪರಿಶೀಲನಾ ಕಾರ್ಯ ಸಮಿತಿಯಿಂದ ಶೀಘ್ರ ಆಗಲಿದೆ. ಇದರೊಂದಿಗೆ ಪಾಲಕರು ಕಾಲೇಜಿನ ಅಭಿವೃದ್ಧಿಗಾಗಿ ತಮ್ಮದೇ ಆದ ಕೊಡುಗೆ ನೀಡಿದಲ್ಲಿ ನ್ಯಾಕ್‌ನಿಂದ ಹೆಚ್ಚಿನ ಅಂಕ ಗಳಿಸಲು ಸಾಧ್ಯ. ಕ್ಯಾಂಟೀನ್‌ನಲ್ಲಿ ರಿಯಾಯಿತಿ ದರದಲ್ಲಿ ಆಹಾರ ದೊರಕಿಸಲು ಪ್ರಯತ್ನ ಮಾಡಲಾಗುತ್ತಿದೆ. ಪರೀಕ್ಷಾ ವೇಳೆಯಲ್ಲಿ ತಮ್ಮ ವೈಯಕ್ತಿಕ ಖರ್ಚಿನಲ್ಲಿ ಕ್ಯಾಂಟೀನ್ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.

ಹುಣಸೂರಿನ ಮಹಾರಾಣಿ ಕಾಲೇಜು: ಸಭೆಗೆ ಆಗಮಿಸಿದ್ದ ಕೆಲ ಪಾಲಕರು ಕಾಲೇಜು ವ್ಯವಸ್ಥೆ, ಶಾಸಕ ಮಂಜುನಾಥ್‌ರ ಶಿಕ್ಷಣ ಕುರಿತಾಗಿನ ಕಾಳಜಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.


ಮೈಸೂರು ಮಹಾರಾಣಿ ಕಾಲೇಜಿನಂತೆ ಹುಣಸೂರಿನ ಮಹಾರಾಣಿ ಕಾಲೇಜು ಆಗಿದೆ. ಅತ್ಯುತ್ತಮ ಪ್ರಾಧ್ಯಾಪಕ ವೃಂದ, ಆಟೋಟಗಳಲ್ಲಿ ಸಾಧನೆ ಆಗುತ್ತಿದ್ದು, ಈ ಕಾಲೇಜಿಗೆ ಮಕ್ಕಳನ್ನು ಸೇರಿಸಲು ಹೆಮ್ಮೆ ಇದೆ ಎಂದು ಪಾಲಕರಾದ ಜೈದ ಅಹಮದ್, ಸೂರ್ಯ, ಸತ್ಯವತಿ, ಮಂಜುಳಾ ಮುಂತಾದವರು ಸಂತಸ ವ್ಯಕ್ತಪಡಿಸಿದರು.
ಪ್ರಾಂಶುಪಾಲ ಜ್ಞಾನಪ್ರಕಾಶ್, ಸಿಡಿಸಿ ಉಪಾಧ್ಯಕ್ಷ ಹನಗೋಡು ನಟರಾಜ್ ಮಾತನಾಡಿದರು. ಸಿಡಿಸಿ ಸದಸ್ಯರಾದ ನಾಗರಾಜು, ಲಿಂಗರಾಜಪ್ಪ, ಚೆನ್ನವೀರಯ್ಯ, ಪ್ರಾಧ್ಯಾಪಕರಾದ ಪುಟ್ಟಶೆಟ್ಟಿ, ಶ್ರೀನಿವಾಸ್, ನಂಜುಂಡಸ್ವಾಮಿ, ಡಾ.ಕೆ.ಎಸ್.ಭಾಸ್ಕರ್ ಇದ್ದರು.