ನ್ಯೂಸ್

ಸಾಲು ಸಾಲು ರಂಗೋತ್ಸವಗಳು, ಸಂಗೀತ ಕಛೇರಿಗಳು

2024ರಲ್ಲಿ ಸಾಂಸ್ಕೃತಿಕ ನಗರಿಯು ಅಪೂರ್ವ ಸಮಾವೇಶ, ಉತ್ಸವಗಳಿಗೆ ಸಾಕ್ಷಿಯಾಯಿತು. ಕೇಂದ್ರ ಸಂಸ್ಕೃತಿ ಸಚಿವಾಲಯವು ಇದೇ ಮೊದಲ ಬಾರಿ ದಾಸ ಪರಂಪರೆಯ ಸಂಗೀತೋತ್ಸವ ಮೈಸೂರು ಸಂಗೀತ ಸುಗಂಧ ಆಯೋಜಿಸಿದ್ದು ವಿಶೇಷ. ಯುವ ದಸರಾದಲ್ಲಿ ಸಂಗೀತ ದಂತಕಥೆಗಳಾದ ಎ.ಆರ್.ರೆಹಮಾನ್ ಹಾಗೂ ಇಳಯರಾಜ ಸಂಗೀತದ ಹೊನಲಿನಲ್ಲಿ ಮೈಸೂರು ಮಿಂಚಿತು. ಸಾಲು ಸಾಲು ರಂಗೋತ್ಸವಗಳು, ಸಂಗೀತ ಕಛೇರಿಗಳು ನಡೆದವು. ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌ಗಳು ಪ್ರೇಕ್ಷಕರಿಂದ ತುಂಬಿ ತುಳುಕಿದವು.

ನಗರದಲ್ಲಿ ನಡೆಯುತ್ತಿದ್ದ ದಸರಾ ಸಾಂಸ್ಕೃತಿಕ ಉತ್ಸವ ಉಳಿದೆಡೆಗೂ ಹಬ್ಬಿತು. ಯುವ ದಸರಾ ನಗರದ ಹೊರವಲಯದ ಉತ್ತನಹಳ್ಳಿಯ ಬಯಲಿಯಲ್ಲಿ ಆಯೋಜನೆಗೊಂಡಿದ್ದು, ಸಂಗೀತದ ಸಿಹಿಗೆ ಇರುವೆಗಳಂತೆ ಜನರು ಮುತ್ತಿದರು. ಯುವ ಸಂಭ್ರಮ, ಜಾನಪದೋತ್ಸವ, ರೈತ ದಸರೆ ರಂಗನ್ನು ಹೆಚ್ಚಿಸಿದವು.

ವರ್ಷಾಂತ್ಯಕ್ಕೆ ಮೈಸೂರಿನ ರಾ.ವಿಶ್ವೇಶ್ವರನ್ ಹಾಗೂ ಸಹನಾ ವೇಣುಗೋಪಾಲ್ ಅವರಿಗೆ ಸಂಗೀತ ನಾಟಕ ಅಕಾಡೆಮಿ ಹಾಗೂ ಪಿರಿಯಾಪಟ್ಟಣದ ವಿಮರ್ಶಕ ಕೆ.ವಿ.ನಾರಾಯಣ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗರಿ ಮುಡಿಗೇರಿತು. ಐವರಿಗೆ ರಾಜ್ಯೋತ್ಸವ ಪ್ರಶಸ್ತಿಯೂ ದೊರೆಯಿತು.

ಜನವರಿಯ ಸಂಕ್ರಾಂತಿಯಲ್ಲಿ ನಡೆಯುತ್ತಿದ್ದ ರಂಗಾಯಣ ಬಹುರೂಪಿ ರಾಷ್ಟ್ರೀಯ ರಂಗೋತ್ಸವವು ಮಾರ್ಚ್‌ನಲ್ಲಿ ನಡೆಯಿತು. ರಂಗ ವಸಂತವು ರಂಗೋತ್ಸವಗಳಿಗೆ ಮುನ್ನುಡಿ ಬರೆಯಿತು. ಇವ ನಮ್ಮವ ಇವ ನಮ್ಮವ ಪರಿಕಲ್ಪನೆಯಲ್ಲಿ ಅರಳಿದ 2024ರ ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಲೇಖಕ ಜಯಂತ ಕಾಯ್ಕಿಣಿ ಉದ್ಘಾಟಿಸಿದ್ದರು. ಒಂದು ವಾರಕಾಲ ಜನಪದ ಸಂಭ್ರಮ, ಚಲನಚಿತ್ರೋತ್ಸವ, ನಾಟಕೋತ್ಸವ ಹಾಗೂ ವಚನ ಗಾಯನ ಕಾರ್ಯಕ್ರಮಗಳು ನಡೆದವು.

ಸಂಚಲನ ಮೈಸೂರು ಸಂಸ್ಥೆಯು ಫೆ.12ರಿಂದ 16ರವರೆಗೆ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಸಂಚಲನ ಮಕ್ಕಳ ನಾಟಕೋತ್ಸವ ಆಯೋಜಿಸಿತ್ತು. ಅಲ್ಲದೆ, ಒಂದೂವರೆ ವರ್ಷದಿಂದ ಖಾಲಿಯಾಗಿದ್ದ ರಂಗಾಯಣ ನಿರ್ದೇಶಕರಾಗಿ ಸತೀಶ್ ತಿಪಟೂರು ನೇಮಕಗೊಂಡರು. ಜೆಎಸ್‌ಎಸ್ ಸಂಗೀತ ಸಮ್ಮೇಳನ ಮೇಳೈಸಿದರೆ, ವಾಣಿವಿಲಾಸ ಮೊಹಲ್ಲಾದ ಪಾರಂಪರಿಕ ಸಂಗೀತೋತ್ಸವ ಕಳೆಗಟ್ಟಿತ್ತು. ವರ್ಷದ ಕೊನೆಯಲ್ಲಿ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಪ್ರಯುಕ್ತ ಆಯೋಜಿಸಿದ್ದ ಸಂಗೀತ ಸಂಜೆ ಜನರನ್ನು ಆಕರ್ಷಿಸಿತು.