ಬೆಂಗಳೂರು: ಸಾಲ ತೀರಿಸಲು ಹಳೇ ಆರೋಪಿಗಳ ಜತೆಗೂಡಿ ಮನೆಗಳ್ಳತನ ಮಾಡುತ್ತಿದ್ದ ಗೃಹರಕ್ಷಕ ದಳ ಸಿಬ್ಬಂದಿ ಸೇರಿ ಮೂವರನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ.
ಹೋಂಗಾರ್ಡ್ ಆಗಿರುವ ಚಿಕ್ಕಬಸವಪುರದ ನಿವಾಸಿ ವಸಂತ್‌ಕುಮಾರ್ (33), ಬೈಯ್ಯಪ್ಪನಹಳ್ಳಿಯ ಸೇವಾನಗರದ ಅಜಯ್ ಅಲಿಯಾಸ್ ಹಂಡೇ (25) ಹಾಗೂ ಕೋಲಾರದ ಕೆಜಿಎ್ ಮೂಲದ ಸಾದಿಕ್ ಪಾಷ (24) ಬಂಧಿತರು. ಆರೋಪಿಗಳ ಬಂಧನದಿಂದ ಒಟ್ಟು 12 ಕಳವು ಪ್ರಕರಣ ಪತ್ತೆಯಾಗಿವೆ. ಒಟ್ಟು 14 ಲಕ್ಷ ರೂ. ಮೌಲ್ಯದ 250 ಗ್ರಾಂ ಚಿನ್ನಾಭರಣ, 2 ಕೆ.ಜಿ. ಬೆಳ್ಳಿ ವಸ್ತು, 1 ಕಾರು ಜಪ್ತಿ ಮಾಡಲಾಗಿದೆ.
ಅಜಯ್ ಅಲಿಯಾಸ್ ಹಂಡೇ ಮತ್ತು ಸಾದಿಕ್ ಪಾಷಾ ಮದ್ಯ ಸೇವನೆ, ಜೂಜಾಟ ಇನ್ನಿತರ ದುಶ್ಚಟಗಳಿಗೆ ದಾಸರಾಗಿದ್ದರು. ಮೋಜು ಮಾಡಲು ಹಣಕ್ಕಾಗಿ ಮನೆಗಳ್ಳತನಕ್ಕೆ ಇಳಿದಿದ್ದರು. ಈ ಹಿಂದೆ ಬೆಂಗಳೂರು ನಗರ ಹಾಗೂ ಕೆ.ಜಿ.ಎ್ ಸೇರಿದಂತೆ ವಿವಿಧ ಠಾಣೆ ವ್ಯಾಪ್ತಿಯಲ್ಲಿ 15 ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಈ ಪ್ರಕರಣಗಳಲ್ಲಿ ಬಂಧಿತರಾಗಿದ್ದು, ಜಾಮೀನಿನ ಮೇಲೆ ಜೈಲಿನಿಂದ ಹೊರಬಂದು ಹಳೇ ಚಾಳಿಯನ್ನು ಮುಂದುವರಿಸಿದ್ದರು.
ಬಾರ್‌ನಲ್ಲಿ ಗೆಳೆತನ: ಗೃಹರಕ್ಷಕ ದಳದಲ್ಲಿ ಕೆಲಸ ಮಾಡುತ್ತಿದ್ದ ವಸಂತ್ ಕುಮಾರ್ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ. ಸಾಲಗಾರರ ಉಪಟಳ ಹೆಚ್ಚಾಗಿದ್ದು, ಹಣ ವಾಪಸ್ ನೀಡುವಂತೆ ಸಾಲಕೊಟ್ಟವರು ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದರು. ಹೇಗಾದರೂ ಮಾಡಿ ಸಾಲ ತೀರಿಸಬೇಕು ಎಂದು ಯೋಚಿಸಿದ್ದ ವಸಂತ್‌ಗೆ ಒಮ್ಮೆ ಬಾರ್‌ನಲ್ಲಿ ಮದ್ಯ ಸೇವಿಸುವಾಗ ಅಜಯ್ ಪರಿಚಯವಾಗಿತ್ತು. ಇಬ್ಬರ ಸ್ನೇಹ ಆತ್ಮೀಯತೆಗೆ ತಿರುಗಿತ್ತು. ಸಾಲದ ವಿಚಾರವನ್ನು ಆತನ ಮುಂದೆ ಹೇಳಿಕೊಂಡಿದ್ದ. ಕಳ್ಳತನ ಮಾಡಿದರೆ ಲಕ್ಷಾಂತರ ರೂ. ಸಿಗುತ್ತದೆ. ಆ ಹಣದಿಂದ ಏನಾದರೂ ಮಾಡಬಹುದು ಎಂದು ವಸಂತ್‌ಗೆ ಅಜಯ್ ಹೇಳಿದ್ದ. ಅದಕ್ಕೆ ಒಪ್ಪಿ ಆತನ ಗೆಳೆಯ ಸಾದಿಕ್ ಜೊತೆಗೂಡಿ ಕೃತ್ಯ ಎಸಗುತ್ತಿದ್ದ.
ಮುಂಬೈ ರೈಲು ನಿಲ್ದಾಣದಲ್ಲಿ ಸೆರೆ: ಕಳೆದ ನಾಲ್ಕೈದು ತಿಂಗಳಲ್ಲಿ ಕೆ.ಆರ್.ಪುರದ ನಾಲ್ಕೈದು ಕಡೆ ಮನೆಗಳ್ಳತನ ನಡೆದಿದ್ದವು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಅ.17ರಂದು ಅಯ್ಯಪ್ಪ ಲೇಔಟ್‌ನಲ್ಲಿ ನಡೆದಿದ್ದ ಕಳವು ಪ್ರಕರಣದಲ್ಲಿ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿಗಳ ಮುಖಚಹರೆ ಪತ್ತೆಯಾಗಿತ್ತು. ಎಲ್ಲ ಪ್ರಕರಣಗಳಲ್ಲಿ ಒಂದೇ ಗುಂಪಿನ ಕೈವಾಡ ಇರುವುದು ಖಚಿತವಾಗಿತ್ತು. ಆರೋಪಿಗಳು ಕೆಲ ದಿನಗಳ ಹಿಂದೆ ಮುಂಬೈಗೆ ಪರಾರಿಯಾಗಿದ್ದರು. ಆರೋಪಿಗಳ ಕುರಿತು ಎಲ್ಲ ಠಾಣೆಗಳಿಗೂ ಮಾಹಿತಿ ರವಾನಿಸಲಾಗಿತ್ತು. ಮುಂಬೈ ರೈಲು ನಿಲ್ದಾಣದಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದಾಗ ಅಲ್ಲಿನ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಅಂತಾರಾಜ್ಯ ಕಳ್ಳರು ಎಂಬುದು ಗೊತ್ತಾಗಿತ್ತು. ಈ ಕುರಿತು ಮುಂಬೈ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಆರೋಪಿಗಳನ್ನು ವಶಕ್ಕೆ ಪಡೆದು ನಗರಕ್ಕೆ ಕರೆತರಲಾಗಿದೆ. ಕಳ್ಳತನ ಮಾಡಿ ಮನೆಯಲ್ಲಿ ಬಚ್ಚಿಟ್ಟಿದ್ದ ಹಾಗೂ ಗಿರವಿ ಅಂಗಡಿಗಳಲ್ಲಿ ಅಡವಿಟ್ಟಿದ್ದ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.